ನ್ಯೂಸ್

ಶೇಖ್​ ಹಸೀನಾರನ್ನು ವಾಪಸ್​ ಕಳುಹಿಸಿ; ಭಾರತ ಸರ್ಕಾರಕ್ಕೆ ಪತ್ರ ಬರೆದ Bangladesh

ನವದೆಹಲಿ: ಪದಚ್ಯುತಗೊಂಡಿರುವ ಮಾಜಿ ಪ್ರಧಾನಿ ಶೇಖ್​ ಹಸೀನಾರನ್ನು ಬಾಂಗ್ಲಾದೇಶಕ್ಕೆ (Bangladesh) ವಾಪಸ್​ ಕಳಿಸಿಕೊಡುವಂತೆ ಅಲ್ಲಿನ ಸರ್ಕಾರ ಭಾರತ ಸರ್ಕಾರಕ್ಕೆ ಪತ್ರ ಬರೆದಿದೆ.

ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ ನಡೆದ ಗಲಭೆ ಸೇರಿದಂತೆ ಮಾಜಿ ಪ್ರಧಾನಿ ಶೇಖ್​ ಹಸೀನಾರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಕಾನೂನು ಪ್ರಕ್ರಿಯೆಗಾಗಿ ಅವರನ್ನು ಬಾಂಗ್ಲಾದೇಶಕ್ಕೆ (Bangladesh) ಕಳಿಸಿಕೊಡುವಂತೆ ಮಧ್ಯಂತರ ಸರ್ಕಾರ ಭಾರತಕ್ಕೆ ಹೇಳಿದೆ.

ಈ ಸಂಬಂಧ ಹೇಳಿಕೆಯನ್ನು ಪ್ರಕಟಿಸಿರುವ ವಿದೇಶಾಂಗ ಸಚಿವ ತೌಹಿದ್ ಹುಸೇನ್, ನ್ಯಾಯಾಂಗ ಪ್ರಕ್ರಿಯೆಯ ಭಾಗವಾಗಿ ಶೇಖ್ ಹಸೀನಾ ಅವರನ್ನು ಢಾಕಾಗೆ ವಾಪಸ್‌ ಕಳುಹಿಸಲು ಕೋರಿ ಭಾರತ ಸರ್ಕಾರಕ್ಕೆ ಮೌಖಿಕ (ರಾಜತಾಂತ್ರಿಕ ಸಂದೇಶ) ಕಳುಹಿಸಿದ್ದೇವೆ. ಢಾಕಾ ಮತ್ತು ನವದೆಹಲಿ ನಡುವೆ ಹಸ್ತಾಂತರ ಒಪ್ಪಂದವು ಈಗಾಗಲೇ ಅಸ್ತಿತ್ವದಲ್ಲಿದೆ. ಹಾಗಾಗಿ ಒಪ್ಪಂದದ ಭಾಗವಾಗಿ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಮರಳಿ ಕರೆತರಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಜಿ ಸೈನಿಕರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಖಂಡಿಸಿ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ಸಂಘಟನೆ ಆರಂಭಿಸಿದ ಪ್ರತಿಭಟನೆಯು ದಿನ ಕಳೆದಂತೆ ಹಿಂಸಾರೂಪ ಪಡೆದ ಕಾರಣ ಪ್ರಧಾನಿ ಶೇಖ್​ ಹಸೀನಾ ಭಾರತಕ್ಕೆ ಆಗಸ್ಟ್​ 05ರಂದು ಭಾರತಕ್ಕೆ ಪಲಾಯನ ಮಾಡಿದ್ದರು. ಈ ಹಿಂಸಾತ್ಮಕ ಪ್ರತಿಭಟನೆಯಲ್ಲಿ 600ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಈ ಸಂಬಂಧ ಹಸೀನಾ, ಮಾಜಿ ಸಚಿವರು ಸೇರಿದಂತೆ 46 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.