Summons: ದೇಶದ್ರೋಹದ ಆರೋಪದ ಮೇಲೆ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತರಾದ ಸಿದ್ದಾರ್ಥ್ ವರದರಾಜನ್ ಮತ್ತು ಕರಣ್ ಥಾಪರ್ಗೆ ಅಸ್ಸಾಂನ ಗುವಾಹಟಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನಿಮ್ಮಿಂದ ಸತ್ಯ ಮತ್ತು ಸಂದರ್ಭಗಳನ್ನು ಖಚಿತಪಡಿಸಿಕೊಳ್ಳಲು, ಜೊತೆಗೆ ನಿಮ್ಮನ್ನು ಪ್ರಶ್ನಿಸಲು ನಮ್ಮ ಬಳಿ ಸಮಂಜಸವಾದ ಆಧಾರಗಳಿವೆ. ಆಗಸ್ಟ್ 22ರಂದು ಗುವಾಹಟಿ ಪೊಲೀಸರ ಅಪರಾಧ ವಿಭಾಗದ ಮುಂದೆ ಹಾಜರಾಗುವಂತೆ ಇನ್ಸ್‌ಪೆಕ್ಟರ್ ಸೌಮರ್‌ಜ್ಯೋತಿ ರೇ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಪ್ರಕರಣದ ಬಗ್ಗೆ ಪೊಲೀಸರು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ವರದರಾಜನ್ ಅವರಿಗೆ ಆಗಸ್ಟ್ 14ರಂದು ಸಮನ್ಸ್ ನೀಡಿದ್ದರೆ, ಥಾಪರ್ಗೆ ಸೋಮವಾರ ನೀಡಲಾಗಿದೆ. ಸಮನ್ಸ್ಗೆ ಉತ್ತರಿಸದೇ ಮತ್ತು ವಿಚಾರಣೆಗೆ ಹಾಜರಾಗದಿದ್ದರೆ ನಿಮ್ಮನ್ನು ಬಂಧಿಸಬಹುದು ಎಂದು ಉಲ್ಲೇಖಿಸಲಾಗಿದೆ.
ಸಿದ್ದಾರ್ಥ್ ವರದರಾಜನ್ ಮತ್ತು ಥಾಪರ್ ವಿರುದ್ದ ಬಿಎನ್‌ಎಸ್‌ನ ಸೆಕ್ಷನ್ 152, 196, 197(1)(D)/3(6), 353, 45 ಮತ್ತು 61 ರ ಅಡಿಯಲ್ಲಿ ಅಪರಾಧ ಶಾಖೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಿಎನ್‌ಎಸ್‌ನ ಸೆಕ್ಷನ್ 152 ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳನ್ನು ಉಲ್ಲೇಖಿಸುತ್ತದೆ.(ಏಜೆನ್ಸೀಸ್)