ಉಪರಾಷ್ಟ್ರಪತಿ ಚುನಾವಣೆ; ಎನ್​ಡಿಎ ಅಭ್ಯರ್ಥಿ ರಾಧಕೃಷ್ಣನ್ ತಮಿಳು ಎಂಬ ಕಾರಣಕ್ಕೆ ಬೆಂಬಲಿಸಲ್ಲ: ನಮಗೆ ಸಿದ್ಧಾಂತ ಮುಖ್ಯ ಎಂದ ಡಿಎಂಕೆ| DMK

DMK
Published on

DMK: ಉಪರಾಷ್ಟ್ರಪತಿ ಚುನಾವಣೆಯಲ್ಲಿ ತಮಿಳುನಾಡು ಮೂಲದ ಎನ್​ಡಿಎ ಅಭ್ಯರ್ಥಿ ಸಿ.ಪಿ.ರಾಧಕೃಷ್ಣನ್ ಅವರನ್ನು ಬೆಂಬಲಿಸುಂತೆ ಬಿಜೆಪಿ ಮತ್ತು ಎಐಎಡಿಎಂಕೆ ಮನವಿಗೆ ಪ್ರತಿಕ್ರಿಯಿಸಿರುವ ತಮಿಳುನಾಡಿನ ಆಡಳಿತರೂಢ ಡಿಎಂಕೆ ಪಕ್ಷವು, ನಮಗೆ ಸಿದ್ಧಾಂತ ಮುಖ್ಯ, ತಮಿಳಿಗ ಎಂಬ ಕಾರಣಕ್ಕೆ ಅವರನ್ನು ಬೆಂಬಲಿಸುವ ಯಾವುದೇ ಉದ್ದೇಶ ಇಲ್ಲ ಎಂದು ಹೇಳಿದೆ ಮಂಗಳವಾರ(ಆಗಸ್ಟ್ 19) ವರದಿಯಾಗಿದೆ.

ಈ ಕುರಿತು ಮಾತನಾಡಿರುವ ಡಿಎಂಕೆ ವಕ್ತಾರ ಟಿಕೆಎಸ್ ಎಳಂಗೋವನ್, ಸಿ.ಪಿ.ರಾಧಾಕೃಷ್ಣನ್ ಅವರು ತಮಿಳು ಎಂಬ ಕಾರಣಕ್ಕೆ ನಾವು ಅವರನ್ನು ಬೆಂಬಲಿಸಲು ಸಾಧ್ಯವಿಲ್ಲ. ಅವರ ಸಿದ್ಧಾಂತಗಳು ಏನೆಂದು ನಾವು ನೋಡಬೇಕು. ಬಿಜೆಪಿ ತಮಿಳು ಮತ್ತು ತಮಿಳುನಾಡಿಗೆ ಏನೂ ಮಾಡಿಲ್ಲ. ಕೀಜಾಡಿ ಉತ್ಖನನವನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿಲ್ಲ. ರಾಜ್ಯಕ್ಕೆ ನೀಡಬೇಕಾದ ಹಣವನ್ನು ಬಿಡುಗಡೆ ಮಾಡಿಲ್ಲ" ಎಂದು ಹೇಳಿದರು.

ಜೊತೆಗೆ ಕೇಂದ್ರ ಸರ್ಕಾರ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಹೇಗೆ ನಡೆಸಿಕೊಂಡಿತು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಈಗ ಅವರು ಎಲ್ಲಿದ್ದಾರೆಂದು ನಮಗೆ ತಿಳಿದಿಲ್ಲ. ವಿಪಕ್ಷಗಳ ಕೂಟ ತಮಿಳು ಮೂಲದ ಅಭ್ಯರ್ಥಿಯನ್ನು ಕಣಕ್ಕಳಿಸುವ ಬಗ್ಗೆ ನಾಯಕರು ಒಟ್ಟಾಗಿ ನಿರ್ಧರಿಸುತ್ತಾರೆ" ಎಂದು ತಿಳಿಸಿದರು.

1987ರಲ್ಲಿ ಆರ್. ವೆಂಕಟರಾಮನ್ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದಾಗ 'ತಮಿಳಿಗ' ಎಂಬ ವಾದವನ್ನು ಬಳಸಿಕೊಂಡು ಡಿಎಂಕೆಯನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುವ ಇದೇ ರೀತಿಯ ಪರಿಸ್ಥಿತಿ ನಡೆಯಿತು. ಆ ವೇಳೆ ತಮಿಳುನಾಡಿನ 'ಕೆಲವು ಪಕ್ಷಗಳು' ತಮಿಳು ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಎಂಬ ಬಗ್ಗೆ ಅಂದಿನ ಎಐಎಡಿಎಂಕೆ ನಾಯಕ ಮತ್ತು ಸಿಎಂ ಎಂ.ಜಿ ರಾಮಚಂದ್ರನ್, ತಮಿಳಿಗನನ್ನು ಬೆಂಬಲಿಸದಿರುವುದು ಅವರ ನಿಲುವು ಎಂದು ಹೇಳಿದ್ದರು. ಹಾಗೆಯೇ ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ, ಅವರು ತಮಿಳಿಗರೇ ಎಂಬುದನ್ನು ನೋಡುವುದಕ್ಕಿಂತ ತಮಿಳು ಜನರಿಗೆ ಏನು ಮಾಡಿದ್ದಾರೆ ಎಂಬುದನ್ನು ಗಮನಿಸುವುದು ಮುಖ್ಯ" ಎಂದು ಹೇಳಿದ್ದರು.

ಬಿಜೆಪಿಯ ರಾಧಾಕೃಷ್ಣನ್ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಎನ್‌ಡಿಎ ನಿರ್ಧಾರವನ್ನು ತಮಿಳುನಾಡಿನ ಹಲವು ವಿರೋಧ ಪಕ್ಷಗಳ ವಿರೋಧಿಸಿವೆ. ಅವರ ನಾಮನಿರ್ದೇಶನವು ಅವರ ತಮಿಳು ಗುರುತಿಗಿಂತ ಹೆಚ್ಚಾಗಿ ಆರ್‌ಎಸ್‌ಎಸ್ ಹಿನ್ನೆಲೆಯಲ್ಲಿ ಬೇರೂರಿದೆ ಎನ್ನುತ್ತಿವೆ ಎನ್ನಲಾಗಿದೆ. ಏತನ್ಮಧ್ಯೆ, ಡಿಎಂಕೆಯ ಐದು ಅವಧಿಯ ರಾಜ್ಯಸಭಾ ಸದಸ್ಯ ತಿರುಚಿ ಶಿವ ಮತ್ತು ಇಸ್ರೋದ ಮಾಜಿ ವಿಜ್ಞಾನಿ ಮೈಲ್ಸ್ವಾಮಿ ಅಣ್ಣಾದೊರೈ ಅವರ ಹೆಸರುಗಳು ಇಂಡಿಯಾ ಒಕ್ಕೂಟದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಕೇಳಿಬರುತ್ತಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net