ನವದೆಹಲಿ: ವಿದೇಶದಲ್ಲಿ ಓದುವ ಕನಸು ಎಲ್ಲರಿಗೂ ನನಸಾಗುವುದಿಲ್ಲ. ಪ್ರತಿಭಾವಂತರಾಗಿದ್ದರೂ ಕೂಡ ಮನೆಯ ಆರ್ಥಿಕ ಪರಿಸ್ಥಿತಿ ವಿದೇಶದಲ್ಲಿ ಓದುವ ಕನಸಿಗೆ ಅಡ್ಡಿಯಾಗುತ್ತದೆ. ಶ್ರೀಮಂತರು ಮಾತ್ರ ವಿದೇಶದಲ್ಲಿ ಓದುವ ಕನಸು ಕಾಣಬೇಕು ನಮ್ಮಂಥವರಲ್ಲ ಎಂದು ಸಾಮಾನ್ಯ ಜನರು ಹೇಳುತ್ತಾರೆ. ಆದರೆ, ಮನಸ್ಸು ಮಾಡಿದರೆ ಸಾಮಾನ್ಯನು ಕೂಡ ಅಸಮಾನ್ಯನಾಗಬಹುದು ಎಂಬುದನ್ನು ಈ ಒಂದು ಸ್ಫೂರ್ತಿದಾಯಕ ಕತೆ ಸಾಬೀತು ಮಾಡಿದೆ.
ಸೆಕ್ಯುರಿಟಿ ಗಾರ್ಡ್ ಮಗಳು ಯುನೈಟೆಡ್ ಕಿಂಗ್ಡಮ್ನಲ್ಲಿ ಪದವಿ ಪಡೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾಳೆ. ಈ ಸ್ಫೂರ್ತಿದಾಯಕ ಕತೆಯನ್ನು ಧನಶ್ರೀ ಜಿ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ತಂದೆ-ಮಗಳ ಭಾವನಾತ್ಮಕ ಕ್ಷಣವನ್ನು ನೋಡಿ ನೆಟ್ಟಿಗರು ಕೂಡ ಭಾವುಕರಾಗಿದ್ದಾರೆ. ಅಲ್ಲದೆ, ಯುವತಿ ಮತ್ತು ಆಕೆಯ ತಂದೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗಮನಾರ್ಹ ಸಂಗತಿ ಏನೆಂದರೆ, ಉದ್ಯಮಿ ಅಮಾನ್ ಗುಪ್ತ ಮತ್ತು ನಾಯಕ ಆಯುಷ್ಮಾನ್ ಖುರಾನ್ ಸಹ ಹೊಗಳಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಯುವತಿ ತನ್ನ ತಂದೆಯನ್ನು ಅಪ್ಪಿಕೊಳ್ಳುವ ದೃಶ್ಯದಿಂದ ವಿಡಿಯೋ ಆರಂಭವಾಗುತ್ತದೆ. ಸೆಕ್ಯುರಿಟಿ ಗಾರ್ಡ್ ಆಗಿರುವ ತಂದೆ ಮಗಳನ್ನು ವಿದೇಶಕ್ಕೆ ಕಳುಹಿಸಿಕೊಡುವ ದೃಶ್ಯ ಹಾಗೂ ಯುವತಿ ಯುಕೆಯ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯುತ್ತಿರುವುದು ಮತ್ತು ಪದವಿ ಪಡೆದ ಬಳಿಕ ಸಂಭ್ರಮಿಸುತ್ತಿರುವ ದೃಶ್ಯವಿದೆ.
ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾಗಳು ಅಪ್ಪ ಎಂದು ವಿಡಿಯೋಗೆ ಅಡಿಬರಹ ನೀಡಲಾಗಿದೆ. ನೀನೊಬ್ಬ ಕೇವಲ ಸೆಕ್ಯುರಿಟಿ ಗಾರ್ಡ್, ನಿನ್ನಿಂದ ಮಗಳನ್ನು ವಿದೇಶಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ನನ್ನ ತಂದೆಗೆ ಎಲ್ಲರು ಹೇಳುತ್ತಿದ್ದರು. ಆದರೆ, ನನ್ನ ಮೇಲೆ ನಂಬಿಕೆ ಇಟ್ಟು ನನ್ನ ತಂದೆ ಕಳುಹಿಸಿದರು ಎಂದು ಯುವತಿ ವಿಡಿಯೋ ಮೇಲೆ ಬರೆದುಕೊಂಡಿದ್ದಾಳೆ.
ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಿಜಕ್ಕೂ ಸ್ಪೂರ್ತಿದಾಯಕ. ನಿಮಗೆ ಮತ್ತು ನಿಮ್ಮ ತಂದೆಗೆ ಹೆಚ್ಚಿನ ಶಕ್ತಿ ಸಿಗಲಿ ಎಂದು ಬೋಟ್ ಕಂಪನಿ ಸಂಸ್ಥಾಪಕ ಅಮಾನ್ ಗುಪ್ತ ಅಭಿನಂದನೆ ಸಲ್ಲಿಸಿದ್ದಾರೆ. ನಟ ಆಯುಷ್ಮಾನ್ ಖುರಾನ್, ಕನ್ನಡದ ನಟಿ ಸೋನು ಗೌಡ ಸೇರಿದಂತೆ ಅನೇಕರು ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. (ಏಜೆನ್ಸೀಸ್)