ಸಂಗ್ರಹ ಚಿತ್ರ  
ನ್ಯೂಸ್

ಮೇ 31ರಿಂದ ಶಾಲೆಗಳು ಆರಂಭ; ಮಕ್ಕಳನ್ನು ಸ್ವಾಗತಿಸಲು ಸಕಲ ಸಿದ್ಧತೆ

Webdesk - Manjunatha B

ಬೆಂಗಳೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೇ 31ರಂದು ಶಾಲಾ ಪ್ರಾರಂಭೋತ್ಸವವನ್ನು ಮಾಡುವಂತೆ ಶಾಲಾ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ. ಇದಕ್ಕೆ ಪೂರಕವಾಗಿ ಮೇ 29 ಮತ್ತು 30ರಂದು ಶಾಲೆಗಳನ್ನು ಸ್ವಚ್ಛಗೊಳಿಸಿ ಪ್ರಾರಂಭೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದೆ.

ಶಿಕ್ಷಣ ಇಲಾಖೆಯು 2023-24ನೇ ಸಾಲಿನ ಮಾರ್ಗಸೂಚಿ ಪ್ರಕಟಿಸಿದ್ದು, ಇದರಲ್ಲಿ ವರ್ಷಪೂರ್ತಿ ಶಿಕ್ಷಕರು ಮಾಡಬೇಕಿರುವ ಕಾರ್ಯ ಮಾಹಿತಿ ನೀಡಿದೆ.

ಸುರಕ್ಷತೆಗೆ ಆದ್ಯತೆ

2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆ, ಪರೀಕ್ಷೆಗಳು ಮುಕ್ತಾಯಗೊಂಡ ಬಳಿಕ ಏ.11ರಿಂದ ಮೇ 28ರ ವರೆಗೆ ರಾಜ್ಯಾದ್ಯಂತ ಶಾಲೆಗಳಿಗೆ ಸುಮಾರು ಎರಡು ತಿಂಗಳ ಬೇಸಿಗೆ ರಜೆ ನೀಡಲಾಗಿತ್ತು. ಇದೀಗ ರಜೆ ಮುಕ್ತಾಯಗೊಂಡಿದ್ದು ಮಂಗಳವಾರ ಮತ್ತು ಬುಧವಾರ ಪ್ರತಿ ತರಗತಿ ಕೊಠಡಿ, ಆವರಣ, ಆಟದ ಮೈದಾನ, ಗ್ರಂಥಾಲಯ ಸೇರಿ ಇಡೀ ಶಾಲೆಯನ್ನು ಸ್ವಚ್ಚಗೊಳಿಸಬೇಕು. ಮಕ್ಕಳು ತರಗತಿಯಲ್ಲಿ ಕೂತು ಪಾಠ ಕೇಳಲು ಆರೋಗ್ಯಕರ ರೀತಿಯಲ್ಲಿ ಶಾಲೆಯನ್ನು ಸಜ್ಜುಗೊಳಿಸಬೇಕು.

ಸಂಗ್ರಹ ಚಿತ್ರ

ಶಾಲಾ ಕೊಠಡಿ, ಶೌಚಾಲಯ, ಕಾಂಪೌಂಡ್ ಸೇರಿದಂತೆ ಶಾಲೆಯ ಯಾವುದೇ ಭಾಗ ಮಳೆ ಮತ್ತಿತರ ಕಾರಣದಿಂದ ಹಾನಿಯಾಗಿದ್ದರೆ ಅವುಗಳ ದುರಸ್ಥಿಗೆ ಕ್ರಮ ವಹಿಸುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಇಲಾಖೆಯು ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದೆ.

ಎಸ್‌ಡಿಎಂಸಿ ಸಭೆ

ಪ್ರತಿ ಶಾಲೆಯಲ್ಲೂ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆ ನಡೆಸಿ ಪ್ರಾರಂಭೋತ್ಸವ ಹೇಗೆ ಮಾಡಬೇಕು ಎಂಬ ಬಗ್ಗೆ ಚರ್ಚಿಸಬೇಕು. ಶಾಲಾ ವೇಳಾಪಟ್ಟಿ, ವಿಷಯವಾರು ಕ್ರಿಯಾ ಯೋಜನೆ, ಶಿಕ್ಷಕರ ವೇಳಾಪಟ್ಟಿ, ಶಾಲಾಭಿವೃದ್ಧಿ ಯೋಜನೆ, ಶಾಲಾ ವಾರ್ಷಿಕ ಕ್ಯಾಲೆಂಡರ್ ಸಿದ್ಧಪಡಿಸಿಕೊಳ್ಳಬೇಕು. ಮುಖ್ಯ ಶಿಕ್ಷಕರು ಶಿಕ್ಷಕರೊಂದಿಗೆ ಸಭೆ ನಡೆಸಿ ವಿವಿಧ ಕಾರ್ಯಭಾರಗಳ ಹಂಚಿಕೆ ಮಾಡಬೇಕು.

ವಿದ್ಯಾರ್ಥಿಗಳಿಗೆ ಸ್ವಾಗತ

ಮೇ 31ರಂದು ಶಾಲೆ ಆರಂಭದ ದಿನ ತಳಿರು ತೋರಣಗಳಿಂದ ಶಾಲೆಯನ್ನು ಸಿಂಗರಿಸಿ ಮಕ್ಕಳಿಗೆ ಗುಲಾಬಿ ಹೂ, ಚಾಕಲೇಟ್ ಅಥವಾ ಇನ್ಯಾವುದೇ ಸಿಹಿ ನೀಡಿ ಬರಮಾಡಿಕೊಳ್ಳಬೇಕು. ಅಂದು ಬಿಸಿಯೂಟದಲ್ಲಿ ಒಂದು ಸಿಹಿ ತಿನಿಸು ತಯಾರಿಸಿ ಮಕ್ಕಳಿಗೆ ಬಡಿಸಬೇಕೆಂದು.

. ಮೊದಲ ದಿನದಿಂದಲೇ ಕಳೆದ ಸಾಲಿನಲ್ಲಿ ಅರ್ಧಕ್ಕೆ ಶಾಲೆಯಿಂದ ದೂರು ಉಳಿದ ಮಕ್ಕಳು, ಶಾಲೆಗೆ ಬಾರದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಶಾಲೆಯ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಜಾತಾ ನಡೆಸಿ ಜಾಗೃತಿ ಮೂಡಿಸಬೇಕು ಎಂದು ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಸೂಚಿಸಿದೆ.