ಬಾಲಸೋರ್: ಒಡಿಶಾ ರೈಲು ಅಪಘಾತದಲ್ಲಿ ಮೃತಪಟ್ಟವರ ದೇಹಗಳನ್ನು ಇರಿಸಿದ್ದ ಸರ್ಕಾರಿ ಶಾಲೆಯನ್ನು ಕೆಡವಲು ಶಾಲಾ ಆಡಳಿತ ಮುಂದಾಗಿದೆ.
ರೈಲು ಅಪಘಾತದ ನಂತರ ಬಾಲಸೋರ್‌ನ ಸರ್ಕಾರಿ ಬಹನಾಗಾ ಪ್ರೌಢಶಾಲೆಯಲ್ಲಿ ಮೃತದೇಹಗಳನ್ನು ಇರಿಸಿ ತಾತ್ಕಾಲಿಕ ಶವಾಗಾರವಾಗಿ ಮಾಡಲಾಗಿತ್ತು. ಅನೇಕ ವಿದ್ಯಾರ್ಥಿಗಳು ಮತ್ತು ಪೋಷಕರು ಈ ಶಾಲೆಯ ಆವರಣಕ್ಕೆ ಮರಳಲು ಹಿಂದೇಟು ಹಾಕಿದ್ದರಿಂದ ಶಾಲಾ ಆಡಳಿತ ಸಮಿತಿಯು ಶಾಲಾ ಕಟ್ಟಡವನ್ನು ನೆಲಸಮಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಶಾಲೆಗೆ ವಿದ್ಯಾರ್ಥಿಗಳು ಬರಲು ಹಿಂಜರಿಯುತ್ತಿದ್ದು, ಕಿರಿಯ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ ಎಂದು ಮುಖ್ಯೋಪಾಧ್ಯಾಯಿನಿ ಹೇಳಿದ್ದಾರೆ.
ನಿನ್ನೆ ಶಾಲೆಗೆ ಭೇಟಿ ನೀಡಿದ್ದ ಬಾಲಸೋರ್ ಜಿಲ್ಲಾಧಿಕಾರಿ ದತ್ತಾತ್ರಯ ಭೌಸಾಹೇಬ್ ಶಿಂಧೆ, ಶಾಲಾ ಆಡಳಿತ ಸಮಿತಿ ಸದಸ್ಯರು, ಮುಖ್ಯೋಪಾಧ್ಯಾಯಿನಿ, ಶಾಲಾ ಸಿಬ್ಬಂದಿ ಹಾಗೂ ಸ್ಥಳೀಯರನ್ನು ಭೇಟಿ ಮಾಡಿದ್ದರು. ಸುಮಾರು 65 ವರ್ಷಗಳ ಹಳೆ ಕಟ್ಟಡವನ್ನು ಕೆಡವಿ, ಮಕ್ಕಳಿಗೆ ಭಯವಾಗದಂತೆ ನವೀಕರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಜೂನ್ 2ರಂದು ಸಂಭವಿಸಿದ ಭೀಕರ ಅಪಘಾತದಲ್ಲಿ 288 ಜನರು ಮೃತಪಟ್ಟಿದ್ದರು ಮತ್ತು 1,100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅಪಘಾತದ 51 ಗಂಟೆಗಳ ನಂತರ ಭಾನುವಾರ ತಡರಾತ್ರಿ ಮತ್ತೆ ರೈಲು ಸಂಚಾರ ಪುನರಾರಂಭವಾಗಿತ್ತು.(ಏಜೆನ್ಸೀಸ್)