ನವದೆಹಲಿ: ಸರ್ವೋಚ್ಚ ನ್ಯಾಯಾಲಯ ಇಂದು ಮಹತ್ವದ ಆದೇಶವೊಂದನ್ನು ನೀಡಿದ್ದು, ಆ ಮೂಲಕ ನಿಗದಿತ ಸಂತ್ರಸ್ತರ ಪರಿಹಾರ ಮೊತ್ತದಲ್ಲಿ ಹೆಚ್ಚಳವಾಗಲಿದೆ. ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶವನ್ನು ನೀಡಿದೆ.
ಒಳಚರಂಡಿಯನ್ನು ಕೈಯಲ್ಲಿ ಸ್ವಚ್ಛ ಮಾಡುವಾಗ ಸಾವಿಗೀಡಾದವರ ಕುಟಂಬಕ್ಕೆ ಮತ್ತು ಇಂಥ ಪ್ರಕರಣಗಳಲ್ಲಿ ಅಂಗವೈಕಲ್ಯ ಉಂಟಾದವರಿಗೆ ನೀಡುವ ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಈ ನ್ಯಾಯಪೀಠ ಶುಕ್ರವಾರ ಆದೇಶ ನೀಡಿದೆ.
ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್ಗಳನ್ನು ಕೈಯಲ್ಲಿ ಸ್ವಚ್ಛ ಮಾಡುವಾಗ ಸಾವಿಗೀಡಾದವರ ಕುಟುಂಬಕ್ಕೆ 30 ಲಕ್ಷ ರೂ. ಹಾಗೂ ಇಂಥ ಸಂದರ್ಭದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದವರಿಗೆ 20 ಲಕ್ಷ ರೂಪಾಯಿಗೆ ಕಡಿಮೆ ಇರದಂತೆ ಪರಿಹಾರ ನೀಡಬೇಕು ಎಂದು ಆದೇಶಿಸಲಾಗಿದೆ.
ಅಲ್ಲದೆ ಭಾಗಶಃ ಅಂಗವೈಕಲ್ಯಕ್ಕೆ ಒಳಗಾದವರಿಗೆ 10 ಲಕ್ಷ ರೂಪಾಯಿಗೆ ಕಡಿಮೆ ಇರದಂತೆ ಪರಿಹಾರ ನೀಡಬೇಕು ಎಂದಿರುವ ನ್ಯಾಯಪೀಠ, ಕೈಯಲ್ಲಿ ಸ್ವಚ್ಛಗೊಳಿಸುವಂಥ ಇಂಥ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಲಗಿಸಬೇಕಾದ ಅಗತ್ಯವಿದೆ ಎಂದೂ ಅಭಿಪ್ರಾಯ ಪಟ್ಟಿದೆ.