ನವದೆಹಲಿ: ಅಡ್ವೋಕೇಟ್ ಪ್ರಶಾಂತ್ ಭೂಷಣ್ ಅವರು ಎರಡು ಟ್ವೀಟ್ಗಳ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎನ್ನಲಾದ ಪ್ರಕರಣದ ವಿಚಾರಣೆ ನಾಳೆಯಿಂದ ಸುಪ್ರೀಂ ಕೋರ್ಟ್ ನಲ್ಲಿ ಶುರುವಾಗಲಿದೆ. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿಆರ್ ಗವಾಯಿ, ಕೃಷ್ಣ ಮುರಾರಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಈ ಪ್ರಕರಣದ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಿದೆ.
ಪ್ರಶಾಂತ್ ಭೂಷಣ್ ಅವರು ತಮ್ಮ ಟ್ವೀಟ್ನಲ್ಲಿ, ಕಳೆದ ಆರು ವರ್ಷಗಳಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳುಗೆಡಹುವಲ್ಲಿ ಈ ಹಿಂದಿನ ನಾಲ್ವರು ಸಿಜೆಐಗಳದ್ದೂ ಒಂದೊಂದು ಪಾತ್ರ ಇದೆ ಎಂಬರ್ಥದ ಸಂದೇಶ ಅಪ್ಡೇಟ್ ಮಾಡಿದ್ದರು. ಇದಲ್ಲದೆ, ಹಾಲಿ ಸಿಜೆಐ ಎಸ್.ಎ.ಬೊಬ್ಡೆ ಅವರ ವಿರುದ್ಧವೂ ಆರೋಪ ಮಾಡಿದ್ದರು. ನ್ಯಾಯಮೂರ್ತಿ ಬೊಬ್ಡೆ ಅವರು ಕಳೆದ ತಿಂಗಳು ನಾಗಪುರದಲ್ಲಿ ಹಾರ್ಲೆ ಡೇವಿಡ್ಸನ್ ಬೈಕ್ನಲ್ಲಿ ಕುಳಿತ ಫೋಟೋ ಕುರಿತಾದ ಕಮೆಂಟ್ ಆಗಿತ್ತು ಅದು.
ಇದನ್ನೂ ಓದಿ: ಒಂದಿಷ್ಟು ಶುಲ್ಕ ಪಾವತಿಸಿದ್ರೆ 2 ಕೋಟಿ ನಿಮ್ದಾಗುತ್ತೆ, ಯಾಕೆ ಕಳ್ಕೋತೀರಿ? ಎಂದು ಹೇಳ್ತಾನೇ ವಂಚಿಸಿದ್ರು ನೋಡಿ..!
ಇದಲ್ಲದೆ, ಭೀಮಾ ಕೋರೇಗಾಂವ್ ಕೇಸ್ನಲ್ಲಿ ಆರೋಪಿಗಳಾದ ವರವರ ರಾವ್, ಸುಧಾ ಭಾರದ್ವಾಜ್ ಅವರನ್ನು ಜೈಲಿನಲ್ಲಿ ನಡೆಸಿಕೊಳ್ಳುತ್ತಿರುವ ರೀತಿಯನ್ನೂ ಟೀಕಿಸಿದ್ದರು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರಶಾಂತ್ ಭೂಷಣ್ ಅವರ ವಿರುದ್ಧದ ಈ ನ್ಯಾಯಾಂಗ ನಿಂದನೆಯ ಪ್ರಕರಣ ವಿಚಾರಣೆ ಈಗ ಕುತೂಹಲ ಕೆರಳಿಸಿದೆ. (ಏಜೆನ್ಸೀಸ್)