ನ್ಯೂಸ್

ಮೋರಾಟೋರಿಯಂ ಅವಧಿಗೇಕೆ ಹೆಚ್ಚುವರಿ ಬಡ್ಡಿ; ನಿಲುವು ಸ್ಪಷ್ಟಪಡಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ನವದೆಹಲಿ: ಲಾಕ್​ಡೌನ್​ ವೇಳೆ ಸಾಲ ಮರುಪಾವತಿ ಅವಧಿ ವಿಸ್ತರಿಸಿದ ಸಮಯಕ್ಕೂ ವಿಧಿಸಿದ ಬಡ್ಡಿಮನ್ನಾ ವಿಚಾರವಾಗಿ ಒಂದು ವಾರದೊಳಗೆ ನಿಲುವು ತಿಳಿಸುವಂತೆ ಸುಪ್ರೀಂ ಕೋರ್ಟ್​ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.

ಮೋರಾಟೋಟರಿಯಂ ಅವಧಿಯಲ್ಲಿ ಹೆಚ್ಚುವರಿ ಬಡ್ಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವುದೇ ಕ್ರಮ ಅಥವಾ ನಿರ್ಧಾರ ಕೈಗೊಳ್ಳದ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್​, ಒಂದು ವಾರದ ಗಡುವು ನೀಡಿದೆ.

ಈ ವಿಚಾರದಲ್ಲಿ ನಿಲುವು ಪ್ರಕಟಿಸಲು ನೈಸರ್ಗಿಕ ವಿಕೋಪ ಕಾಯ್ದೆಯಡಿಯಲ್ಲಿ ಸಾಕಷ್ಟು ಅವಕಾಶವಿದೆ. ಆದರೆ, ಕೇಂದ್ರ ಸರ್ಕಾರ ಆರ್​ಬಿಐ ಮರೆಯಲ್ಲಿ ಅಡಗಲು ಪ್ರಯತ್ನಿಸುತ್ತಿದೆ ಎಂದು ನ್ಯಾಯಮೂರ್ತಿ ಅಶೋಕ್​ ಭೂಷಣ್​ ನೇತೃತ್ವದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಪೀಠದ ಇನ್ನುಳಿದ ನ್ಯಾಯಮೂರ್ತಿಗಳಾದ ಆರ್​. ಸುಭಾಷ್​ ರೆಡ್ಡಿ ಹಾಗೂ ಎಂ.ಆರ್​. ಷಾ ಕೂಡ ಕೇಂದ್ರದಿಂದ ವಿವರಣೆ ಬಯಸಿದರು. ಬಡ್ಡಿಯ ಮತ್ತೆ ಬಡ್ಡಿ ವಿಧಿಸಬಹುದೇ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಅಂತಿಮವಾಗಿ ಸಾಲಿಸಿಟರ್​ ಜನರಲ್​ ತುಷಾರ್​ಮೆಹ್ತಾ ಮನವಿ ಮೇರೆಗೆ ಕೇಂದ್ರ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿದೆ.

ಇನ್ನೊಂದೆಡೆ ಅರ್ಜಿದಾರರ ಪರವಾಗಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಕಪಿಲ್​ ಸಿಬಲ್​, ಸಾಲ ಮರುಪಾವತಿ ಅವಧಿ ಹೊಂದಾಣಿಕೆ ಆಗಸ್ಟ್​ 31ಕ್ಕೆ ಕೊನೆಗೊಳ್ಳುತ್ತಿದೆ. ಅರ್ಜಿ ವಿಚಾರಣೆ ನಡೆಯವ ತನಕ ಅದನ್ನು ವಿಸ್ತರಿಸಬೇಕೆಂದು ಮನವಿ ಮಾಡಿದರು. ಹೀಗಾಗಿ ನ್ಯಾಯಾಲಯ ಸೆಪ್ಟಂಬರ್​ 1ರಂದು ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿತು.