ನವದೆಹಲಿ: ಚುನಾವಣಾ ಬಾಂಡ್ ಡೇಟಾ ನೀಡಲು ಇರುವ ಗಡುವನ್ನು ವಿಸ್ತರಣೆ ಮಾಡುವಂತೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಫೆ. 15ರಂದು ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್, ಚುನಾವಣಾ ಬಾಂಡ್ ಅಥವಾ ಎಲೆಕ್ಟೋರಲ್ ಬಾಂಡ್ ಯೋಜನೆಯು ಆರ್ಟಿಕಲ್ 19(1)(ಎ) ಅನ್ನು ಉಲ್ಲಂಘಿಸುತ್ತದೆ ಮತ್ತು ಅಸಂವಿಧಾನಿಕವಾಗಿದೆ ಎಂದು ಹೇಳಿ, ಚುನಾವಣಾ ಬಾಂಡ್ ಯೋಜನೆಯನ್ನೇ ರದ್ದು ಮಾಡಿತು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು ಈ ಮಹತ್ವದ ಆದೇಶ ಹೊರಡಿಸಿತು.
ತೀರ್ಪಿನ ವೇಳೆ 2024ರ ಮಾರ್ಚ್ 13 ರೊಳಗೆ ಭಾರತೀಯ ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಎಲೆಕ್ಟೋರಲ್ ಬಾಂಡ್ ಖರೀದಿಗಳ ವಿವರಗಳನ್ನು ಪ್ರಕಟಿಸಬೇಕು ಎಂದು ಸಾಂವಿಧಾನಿಕ ಪೀಠ ಸೂಚಿಸಿತ್ತು. ಅಲ್ಲದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2019ರಿಂದ ಪ್ರಸ್ತುತ ದಿನಾಂಕದವರೆಗೆ ಚುನಾವಣಾ ಬಾಂಡ್ ಕೊಡುಗೆಗಳನ್ನು ಪಡೆದ ಪಕ್ಷಗಳ ವಿವರಗಳನ್ನು ಮಾರ್ಚ್ 6ರೊಳಗೆ ಸಲ್ಲಿಸಲು ತಿಳಿಸಿತ್ತು. ಇದರ ಜತೆಗೆ ಚುನಾವಣಾ ಬಾಂಡ್ ನೀಡುವುದನ್ನು ನಿಲ್ಲಿಸಿ ಎಂದು ಬ್ಯಾಂಕ್ಗಳಿಗೆ ಸೂಚನೆ ನೀಡಿತು.
ಜೂನ್ 30ಕ್ಕೆ ವಿಸ್ತರಿಸಿ
ಇದೀಗ ಗಡುವು ವಿಸ್ತರಣೆ ಕೋರಿ ಎಸ್ಬಿಐ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದೆ. ಜೂನ್ 30ರವೆಗೆ ಗಡುವು ವಿಸ್ತರಣೆ ಮಾಡುವಂತೆ ಎಸ್ಬಿಐ ಮನವಿ ಮಾಡಿದ್ದು, ಇದಕ್ಕೆ ಉನ್ನತ ನ್ಯಾಯಾಲಯ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಚುನಾವಣಾ ಬಾಂಡ್ಗಳ ಬಗ್ಗೆ ನ್ಯಾಯಾಲಯ ಹೇಳಿದ್ದೇನು?
ಕಪ್ಪುಹಣದ ವಿರುದ್ಧದ ಹೋರಾಟ ಮತ್ತು ಬಾಂಡ್ ನೀಡುವ ದಾನಿಗಳ ಗೌಪ್ಯತೆಯನ್ನು ಕಾಪಾಡುವ ಉದ್ದೇಶವು ಈ ಯೋಜನೆಯನ್ನು ಸಮರ್ಥಿಸಿಕೊಳ್ಳಲಾಗದು. ಚುನಾವಣಾ ಬಾಂಡ್ಗಳಿಂದ ಕಪ್ಪುಹಣ ನಿಗ್ರಹವೇ ಅಸಾಧ್ಯವಾಗಿದೆ. ಈ ಯೋಜನೆ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಮತದಾರರು ತಮ್ಮ ಮತ ಚಲಾಯಿಸಲು ಅಗತ್ಯವಾದ ಮಾಹಿತಿಯ ಹಕ್ಕನ್ನು ಹೊಂದಿದ್ದಾರೆ ಮತ್ತು ರಾಜಕೀಯ ಪಕ್ಷಗಳು ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಕೋರ್ಟ್ ಒತ್ತಿಹೇಳಿತು.
ಏನಿದು ಚುನಾವಣಾ ಬಾಂಡ್?
ಈ ಯೋಜನೆಯನ್ನು 2018ರ ಜನವರಿಯಲ್ಲಿ ಆರಂಭಿಸಲಾಯಿತು. ಈ ಚುನಾವಣಾ ಬಾಂಡ್ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಒಂದು ಕ್ರಮವಾಗಿದೆ. ಈ ಬಾಂಡ್ಗಳನ್ನು ಸಾಮಾನ್ಯ ಜನರು ಅಥವಾ ಕಾರ್ಪೊರೇಟ್ ಸಂಸ್ಥೆಗಳು ಬ್ಯಾಂಕ್ಗಳಲ್ಲಿ ಖರೀದಿ ಮಾಡಿ, ಅದನ್ನು ರಾಜಕೀಯ ಪಕ್ಷಗಳಿಗೆ ನೀಡಬಹುದು. ಇದನ್ನು ಪಕ್ಷಗಳು ನಿಧಿಯನ್ನಾಗಿ ಬಳಸಿಕೊಳ್ಳುತ್ತವೆ. ಇಲ್ಲಿ ಬಾಂಡ್ ಖರೀದಿಸಿದ ವ್ಯಕ್ತಿಯಾಗಲಿ, ಸಂಸ್ಥೆಯಾಗಲಿ ಅಥವಾ ಬಾಂಡ್ ಪಡೆದ ಪಕ್ಷದ ಹೆಸರಾಗಲಿ ಬಹಿರಂಗವಾಗುವುದಿಲ್ಲ. ಬದಲಾಗಿ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗುತ್ತದೆ. (ಏಜೆನ್ಸೀಸ್)