ಕೊಪ್ಪಳ: ಕನ್ನಡ ಚಿತ್ರರಂಗದ ಎವರ್ಗ್ರೀನ್ ಸಿನಿಮಾಗಳಲ್ಲಿ ಪ್ರೇಮಲೋಕ ಕೂಡ ಒಂದು. 80ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಮಹತ್ವದ ತಿರುವು ಕೊಟ್ಟ ಸಿನಿಮಾ ಇದು. ನಿರ್ದೇಶಕರಾಗಿ ಪದಾರ್ಪಣೆ ಮಾಡಿದ ಮೊದಲ ಚಿತ್ರದಲ್ಲೇ ಕ್ರೇಜಿಸ್ಟಾರ್ ರವಿಚಂದ್ರನ್ ಹೊಸ ಇತಿಹಾಸವನ್ನೇ ಬರೆದರು.
ಪ್ರೇಮಲೋಕ ಚಿತ್ರದಲ್ಲಿ 11 ಸಾಂಗ್ಸ್ ಇದ್ದಿದ್ದು, ಒಂದು ದಾಖಲೆಯಾದರೆ, ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಷ್, ಟೈಗರ್ ಪ್ರಭಾಕರ್, ಪ್ರಣಯರಾಜ ಶ್ರೀನಾಥ್, ಲೀಲಾವತಿ, ಊರ್ವಶಿ, ಮುಖ್ಯಮಂತ್ರಿ ಚಂದ್ರು ಹಾಗೂ ಲೋಕೇಶ್ ಸೇರಿದಂತೆ ಬಹುತಾರಾಗಣವೇ ಈ ಸಿನಿಮಾದಲ್ಲಿತ್ತು. 1987ರಲ್ಲಿ ಬಿಡುಗಡೆಯಾದ ಈ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಯಿತು. ಆ ಕಾಲದಲ್ಲೇ ಕನ್ನಡ ಮತ್ತು ತಮಿಳು ಎರಡು ಭಾಷೆಯಲ್ಲಿ ಬಿಡುಗಡೆಯಾಯಿತು. ತಮಿಳಿನಲ್ಲಿ ಪರುವ ರಾಗಂ ಹೆಸರಿನಲ್ಲಿ ರಿಲೀಸ್ ಮಾಡಲಾಯಿತು.
ಪ್ರೇಮಲೋಕದ ಮ್ಯೂಸಿಕ್ ವ್ಯಾಪಕವಾಗಿ ಪ್ರಶಂಸೆಗೆ ಪಾತ್ರವಾಯಿತು. ಆ ಸಮಯದಲ್ಲಿ ಆಡಿಯೋ ಕ್ಯಾಸೆಟ್ ಮಾರಾಟದಲ್ಲಿ ದಾಖಲೆಗಳನ್ನು ಸೃಷ್ಟಿಸಿತು. 36 ಲಕ್ಷ ಕ್ಯಾಸೆಟ್ ಮಾರಾಟ ಮಾಡಿದ್ದು ಪ್ರೇಮಲೋಕದ ದಾಖಲೆಯಾಗಿ ಉಳಿದಿದೆ. ಮ್ಯೂಸಿಕ್ ಹಕ್ಕು ಖರೀದಿ ಮಾಡಿದ್ದ ಲಹರಿಗೆ ಒಂದು ದೊಡ್ಡ ಅಡಿಪಾಯವನ್ನೇ ಈ ಸಿನಿಮಾ ಹಾಕಿತು. ಇಂದಿಗೂ ಈ ಹಾಡುಗಳು ಕನ್ನಡರಿಗರ ಮನದಲ್ಲಿ ಅಚ್ಚಳಿಯದೇ ಉಳಿದಿದೆ.
ಪ್ರೇಮಲೋಕ 2 ಫೀವರ್ ಶುರು
ಪ್ರೇಮಲೋಕದ ವೈಭವನ್ನು ಮತ್ತೆ ತೆರೆ ಮೇಲೆ ತರಲು ಕ್ರೇಜಿಸ್ಟಾರ್ ರವಿಚಂದ್ರನ್ ಮುಂದಾಗಿದ್ದಾರೆ. ಕ್ರೇಜಿಸ್ಟಾರ್ ಪ್ರೇಮಲೋಕ 2 ಸಿನಿಮಾ ಮಾಡುತ್ತಾರೆ ಎಂಬ ಮಾತುಗಳು ಕೆಲ ದಿನಗಳಿಂದ ಕೇಳಿಬರುತ್ತಿತ್ತು. ಆದರೆ, ಇದೀಗ ಸ್ವತಃ ರವಿಚಂದ್ರನ್ ಅವರೇ ಇಂದು ದೃಢಪಡಿಸಿದ್ದಾರೆ. ಪ್ರೇಮಲೋಕ 2ಗೆ ಸಮಯ ಕೂಡಿ ಬಂದಿದೆ. ಪ್ರೇಮಲೋಕದಲ್ಲಿ ತಂದೆ ಮಾಡಿದ್ದ ಪಾತ್ರವನ್ನು ಪ್ರೇಮಲೋಕ 2ರಲ್ಲಿ ಪುತ್ರ ಮನೋರಂಜನ್ ರವಿಚಂದ್ರನ್ ಮಾಡಲಿದ್ದಾರೆ.
ಮೇ ಅಂತ್ಯದಿಂದ ಶೂಟಿಂಗ್ ಆರಂಭ
ಕೊಪ್ಪಳದ ಕನಕಗಿರಿ ಉತ್ಸವದಲ್ಲಿ ಮಾತನಾಡಿದ ಕ್ರೇಜಿಸ್ಟಾರ್, ಮೇ 30ರಂದು ಪ್ರೇಮಲೋಕ 2 ಸಿನಿಮಾ ಶೂಟಿಂಗ್ ಆರಂಭವಾಗಲಿದೆ ಎಂದಿದ್ದಾರೆ. ಈ ಚಿತ್ರಕ್ಕೆ ಹಿರಿಯ ಮಗ ಮನೋರಂಜನ್ ನಾಯಕನಾದರೆ, ಚಿಕ್ಕ ಮಗ ವಿಕ್ರಮ್ ಸಣ್ಣ ಪಾತ್ರವನ್ನು ನಿರ್ವಹಿಸಲಿದ್ದಾರೆ. ರವಿಚಂದ್ರನ್ ಅವರು ತಂದೆ ಪಾತ್ರವನ್ನು ನಿರ್ವಹಿಸಲಿದ್ದಾರೆ.
25 ಹಾಡುಗಳು
ಪ್ರೇಮಲೋಕ ಸಿನಿಮಾದಲ್ಲಿ 11 ಹಾಡುಗಳಿದ್ದವು. ಒಂದೊಂದು ಹಾಡು ಕೂಡ ಸಿನಿಮಾಗೆ ಪೂರಕವಾಗಿತ್ತು ಮತ್ತು ಸಖತ್ತಾಗಿ ಕೂಡ ಇತ್ತು. ಹೀಗಾಗಿ ಪ್ರೇಮಲೋಕ ಹಾಡುಗಳು ಇಂದಿಗೂ ಕೇಳುಗರ ಮನತಣಿಸುತ್ತದೆ. ಇದೀಗ ಪ್ರೇಮಲೋಕ 2ರಲ್ಲಿ ಪ್ರೇಮಲೋಕ ಸಿನಿಮಾದ ದಾಖಲೆಯನ್ನು ಮುರಿಯಲು ಕ್ರೇಜಿಸ್ಟಾರ್ ಸಜ್ಜಾಗಿದ್ದಾರೆ. ಪ್ರೇಮಲೋಕ 2ರಲ್ಲಿ 20 ರಿಂದ 25 ಹಾಡುಗಳು ಇರಲಿವೆ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಹೇಳಿದ್ದಾರೆ.
2025ರಲ್ಲಿ ಚಿತ್ರ ತೆರೆಗೆ
ಮೇ 30ರಂದು ಸಿನಿಮಾ ಶೂಟಿಂಗ್ ಆರಂಭವಾದರೆ, ಹಲವು ತಿಂಗಳುಗಳ ಕಾಲ ಶೂಟಿಂಗ್ ನಡೆಯಲಿದೆ. ಮೂಲಗಳ ಪ್ರಕಾರ 2025ಕ್ಕೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯಕ್ಕೆ ಇಷ್ಟು ಮಾಹಿತಿ ಲಭ್ಯವಾಗಿದೆ. ಚಿತ್ರದ ನಾಯಕಿ, ಮತ್ತು ಇತರೆ ಪಾತ್ರಗಳ ಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಲೋಕಸಭಾ ಚುನಾವಣೆ ಬಳಿಕ ಹೊಸ ಸರ್ಕಾರ ಮೊದಲು ಮಾಡಬೇಕಾದ ಕೆಲಸ ಏನೆಂದು ತಿಳಿಸಿದ ಸದ್ಗುರು!
ಇಲ್ಲಿ ಕೇವಲ ಒಂದು ರೂಪಾಯಿಯಲ್ಲಿ ಮದುವೆ ಮಾಡಿಕೊಡ್ತಾರೆ! ಆದರೆ ಒಂದು ಕಂಡೀಷನ್