ಬೆಂಗಳೂರು: ಕಾರವಾರದ ಬೇಲೆಕೇರಿ ಬಂದರಿನಲ್ಲಿದ್ದ ಅದಿರು ಅಕ್ರಮ ಸಾಗಾಟ ಪ್ರಕರಣದಲ್ಲಿ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸೇರಿ 7 ಅಪರಾಧಿಗಳಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 7 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಜತೆಗೆ 44.65 ಕೋಟಿ ರೂ. ದಂಡ ವಿಧಿಸಿ, ಅಪರಾಧಿಗಳಿಂದ ವಸೂಲಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. 14 ವರ್ಷಗಳ ಬಳಿಕ ಬಂದ ಈ ತೀರ್ಪು ಸತೀಶ್ ಸೈಲ್ ಅವರ ಶಾಸಕ ಸ್ಥಾನಕ್ಕೂ ಕುತ್ತು ತಂದಿದೆ. ಜತೆಗೆ ಸಾರ್ವಜನಿಕ ಚುನಾವಣೆ ಸ್ಪರ್ಧೆಯಿಂದ 6 ವರ್ಷ ಬಹಿಷ್ಕಾರಕ್ಕೆ ಒಳಗಾಗಬೇಕಿದೆ.
2009-10ರಲ್ಲಿ ಬೇಲೆಕೇರಿ ಬಂದರಿನಲ್ಲಿದ್ದ ಅದಿರು ಅಕ್ರಮ ಸಾಗಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿತ್ತು. ಲೋಕಾಯುಕ್ತ ಸಂಸ್ಥೆ ವರದಿ ಆಧಾರದ ಮೇಲೆ ಮತ್ತು ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐ ಪ್ರತ್ಯೇಕ 6 ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು. ಸುದೀರ್ಘ ವಾದ-ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಅ.24ರಂದು ಶಾಸಕ ಸತೀಶ್ ಸೈಲ್ ಸೇರಿ ಎಲ್ಲ 7 ಮಂದಿ ದೋಷಿಗಳು ಎಂದು ತೀರ್ಪು ಪ್ರಕಟಿಸಿದ್ದರು. ಶುಕ್ರವಾರ ಶಿಕ್ಷೆ ಪ್ರಮಾಣದ ಕುರಿತು ವಾದ-ಪ್ರತಿವಾದ ಆಲಿಸಿ ಶನಿವಾರ ತೀರ್ಪು ಪ್ರಕಟಿಸಿದ್ದಾರೆ. 6 ಪ್ರಕರಣಗಳಲ್ಲಿಯೂ ಶಿಕ್ಷೆ ಪ್ರಮಾಣ ಮತ್ತು ದಂಡ ಪ್ರಕಟಿಸಲಾಗಿದೆ.
ಒಟ್ಟಾರೆಯಾಗಿ ಒಳಸಂಚಿಗೆ 5 ವರ್ಷ, ವಂಚನೆಗೆ 7 ವರ್ಷ, ಕಳ್ಳತನಕ್ಕೆ 3 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿದೆ. ಜೊತೆಗೆ 44.65 ಕೋಟಿ ರೂ. ದಂಡ ವಿಧಿಸಿದ್ದಾರೆ. ಈಗಾಗಲೇ ಅಪರಾಧಿಗಳು ಕಳೆದಿರುವ ಶಿಕ್ಷೆ ಪ್ರಮಾಣ ಬಿಟ್ಟು ಉಳಿದ ಶಿಕ್ಷೆ ಅನುಭವಿಸಬೇಕು. ಸಿಬಿಐ ಪರ ಎಸ್ಪಿಪಿ ಕೆ.ಎಸ್.ಹೇಮಾ ಮತ್ತು ಶಿವಾನಂದ ಪೆರ್ಲ ಅವರು ವಾದ ಮಂಡಿಸಿದ್ದರು.
ಬೇಲೆಕೇರಿ ಪ್ರಕರಣವೇನು?: ಬೇಲೆಕೇರಿ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನಲ್ಲಿರುವ ಬಂದರು. ಇಲ್ಲಿಂದ ನಿಯಮಬಾಹಿರವಾಗಿ ಬಳ್ಳಾರಿ, ಹೊಸಪೇಟೆ, ಸಂಡೂರು, ಚಿತ್ರದುರ್ಗದ ಅರಣ್ಯ ಪ್ರದೇಶಗಳಿಂದ ಅಪಾರ ಪ್ರಮಾಣದ ಕಬ್ಬಿಣದ ಅದಿರು ವಿದೇಶಕ್ಕೆ ರಫ್ತಾಗುತ್ತಿತ್ತು. 2009ರ ಜ.1ರಿಂದ 2010ರ ಮೇ 31ರವರೆಗೆ, 17 ತಿಂಗಳ ಅವಧಿಯಲ್ಲಿ ಬರೋಬ್ಬರಿ 88 ಲಕ್ಷದ 6 ಸಾವಿರ ಮೆಟ್ರಿಕ್ ಟನ್ ಅದಿರು ರಫ್ತಾಗಿತ್ತು. ಈ ಪೈಕಿ 38 ಲಕ್ಷ ಮೆಟ್ರಿಕ್ ಟನ್ ಅದಿರು ರಫ್ತು ಮಾಡುವುದಕ್ಕಷ್ಟೇ ಅನುಮತಿ ಇತ್ತು. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದ ಅಪರಾಧಿಗಳು 50 ಲಕ್ಷ ಮೆಟ್ರಿಕ್ ಟನ್ ಅದಿರು ಹೆಚ್ಚುವರಿಯಾಗಿ ವಿದೇಶಕ್ಕೆ ರಫ್ತು ಮಾಡಿದ್ದರು. 73 ರಫ್ತುದಾರರು ಈ ರಫ್ತು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ ಅಂದಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಮತ್ತು ಅರಣ್ಯಾಧಿಕಾರಿಗಳು ತನಿಖೆ ನಡೆಸಿ ತನಿಖೆಗೆ ಶಿಫಾರಸು ಮಾಡಿದ್ದರು. 2010ರ ಜೂ.23ರಂದು ಪ್ರಕರಣವನ್ನು ಸಿಐಡಿಗೆ ಸರ್ಕಾರ ಒಪ್ಪಿಸಿತ್ತು. 2011ರಲ್ಲಿ ಪ್ರಕರಣವನ್ನು ಸುಪ್ರೀಂಕೋರ್ಟ್ ಸಿಬಿಐಗೆ ವಹಿಸಿತ್ತು. 2009ರ ಮೇನಿಂದ 2010ರ ನಡುವೆ ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಅದಿರು ಸಾಗಣೆ ಕುರಿತು ತನಿಖೆ ನಡೆಸುವಂತೆ ಸೂಚಿಸಿತ್ತು. 2013ರ ಸೆ.13ರಂದು ಕೇಸ್ ದಾಖಲಿಸಿ ತನಿಖೆ ನಡೆಸಿ ಕೋರ್ಟ್ಗೆ ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು.
ಸತೀಶ್ ಸೈಲ್ ಪಾತ್ರ ಏನು..?: ಸತೀಶ್ ಸೈಲ್ ಮಾಲಿಕತ್ವದ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೖೆ.ಲಿ. ಕಂಪನಿ 7.23 ಲಕ್ಷ ಟನ್ ಮೆಟ್ರಿಕ್ ಅದಿರನ್ನು ಬೇಲೆಕೇರಿ ಮೂಲಕ ವಿದೇಶಕ್ಕೆ ರಫ್ತು ಮಾಡಿರುವುದು ಸಾಬೀತಾಗಿದೆ. ಬೇಲೆಕೇರಿ ಬಂದರಿನ ಮೂಲಕ 88.06 ಲಕ್ಷ ಮೆಟ್ರಿಕ್ ಟನ್ ಅದಿರನ್ನು 73 ರಫ್ತು ಕಂಪನಿಗಳು ವಿದೇಶಕ್ಕೆ ರಫ್ತು ಮಾಡಿರುವ ಬಗ್ಗೆ ಕೇಂದ್ರೀಯ ಸಮಿತಿ ಪ್ರಾಧಿಕಾರ (ಸಿಇಸಿ) ವರದಿಯಲ್ಲಿ ಉಲ್ಲೇಖ ಆಗಿತ್ತು. 7.23 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಸತೀಶ್ ಸೈಲ್ ಕಂಪನಿ ರಫ್ತು ಮಾಡಿತ್ತು ಎಂದು ಸಿಬಿಐ ಅಧಿಕಾರಿಗಳು ಆರೋಪಿಸಿದ್ದರು. ಅಲ್ಲದೆ, ಈ ಪೈಕಿ 4 ಕಂಪನಿಗಳು 33 ಲಕ್ಷ ಮೆಟ್ರಿಕ್ ಟನ್ ಅದಿರು ಕಳುಹಿಸಲಾಗಿತ್ತು. ಈ ಎಲ್ಲ ಕಂಪನಿಗಳ ಅದಿರು ರಫ್ತಿನಲ್ಲಿ ಸೈಲ್ ಪರೋಕ್ಷ ಭಾಗಿಯಾಗಿದ್ದರು. ತನಿಖೆ ಕೈಗೊಂಡ ಸಿಬಿಐ 2012ರ ಸೆ.16ರಂದು ಸೈಲ್ ಮನೆ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ವಶಕ್ಕೆ ಪಡೆದು 2013ರ ಸೆ. 20ರಂದು ಬಂಧಿಸಲಾಗಿತ್ತು. 1 ವರ್ಷಕ್ಕೂ ಅಧಿಕ ಕಾಲ ಜೈಲುವಾಸ ಅನುಭವಿಸಿ 2014ರ ಡಿ.16ರಲ್ಲಿ ಜಾಮಿನು ಪಡೆದು ಹೊರಬಂದಿದ್ದರು.
ಶಾಸಕತ್ವ ಅನರ್ಹ..?: ನಿಯಮಗಳ ಪ್ರಕಾರ 3 ವರ್ಷಗಳಿಗಿಂತ ಹೆಚ್ಚಿನ ಜೈಲು ಶಿಕ್ಷೆಯಾದ ಜನಪ್ರತಿನಿಧಿಗಳು ತಮ್ಮ ಚುನಾಯಿತ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. 7 ವರ್ಷ ಜೈಲು ಶಿಕ್ಷೆ ಆಗಿರುವ ಕಾರಣ ಸತೀಶ್ ಸೈಲ್ ಶಾಸಕ ಸ್ಥಾನವೂ ಅನರ್ಹಗೊಳ್ಳಲಿದೆ. ಹೀಗಾಗಿ ಹೈಕೋರ್ಟ್ನಲ್ಲಿ ಸಲ್ಲಿಸಬಹುದಾದ ಮೇಲ್ಮನವಿ ಅರ್ಜಿಯ ತೀರ್ಪಿನ ಮೇಲೆ ಸತೀಶ್ ಭವಿಷ್ಯ ಅಡಗಿದೆ. ಉತ್ತರ ಕನ್ನಡ ಜಿಲ್ಲೆ ಕಾರವಾರ ವಿಧಾನಸಭಾ ಕ್ಷೇತ್ರದಿಂದ 2013ರಲ್ಲಿ ಪಕ್ಷೇತ್ರರ ಅಭ್ಯರ್ಥಿಯಾಗಿ ಸತೀಶ್ ಸೈಲ್ ಜಯ ಗಳಿಸಿ ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸಿದ್ದರು. ಇದಾದ ಮೇಲೆ 2018ರಲ್ಲಿ ಬಿಜೆಪಿಯ ರೂಪಾಲಿ ನಾಯ್್ಕ ವಿರುದ್ಧ ಸೋಲು ಕಂಡಿದ್ದರು. 2023ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಸತೀಶ್ ಸೈಲ್, ಬಿಜೆಪಿಯ ರೂಪಾಲಿ ನಾಯ್ಕ ವಿರುದ್ಧ ಗೆಲವು ಕಂಡಿದ್ದಾರೆ.
ದೋಷಿಗಳ ಪಟ್ಟಿ: ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್, ಕಾರವಾರ ಬಂದರು ಅಧಿಕಾರಿ ಮಹೇಶ್ ಬಿಳಿಯೆ, ಲಾಲ್ ಮಹಲ್ ಕಂಪನಿ ಮಾಲೀಕ ಪ್ರೇಮ್ ಚಂದ್ ಗರ್ಗ, ಶ್ರೀಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್ ಮಾಲೀಕ ಖಾರದಪುಡಿ ಮಹೇಶ್, ಸ್ವಸ್ತಿಕ್ ಕಂಪನಿ ಮಾಲೀಕ ಕೆ.ವಿ. ನಾಗರಾಜ್, ಗೋವಿಂದರಾಜು, ಆಶಾಪುರ ಕಂಪನಿ ಮಾಲೀಕ ಚೇತನ್.
ಮುಂದಿನ ಸಾಧ್ಯಾಸಾಧ್ಯತೆಗಳು ಕೆಳಹಂತದ ತೀರ್ಪು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಜಾಮೀನು ಮತ್ತು ಶಿಕ್ಷೆಗೆ ತಡೆ ನೀಡುವಂತೆ ವಾದ ಮಂಡನೆ 7 ವರ್ಷ ಶಿಕ್ಷೆಯಿಂದ ಶಾಸಕ ಸ್ಥಾನದ ಅನರ್ಹತೆ ಪ್ರಕ್ರಿಯೆ 6 ತಿಂಗಳ ಒಳಗಾಗಿ ಉಪ ಚುನಾವಣೆ ನಡೆಯುವ ಸಾಧ್ಯತೆ ಕೋರ್ಟ್ ಸೂಚನೆಯಂತೆ ದೋಷಿಗಳಿಂದ ದಂಡ ವಸೂಲಿ
ನ್ಯಾಯಾಂಗದ ಮೇಲೆ ವಿಶ್ವಾಸ ಹೆಚ್ಚಾಗಿದೆ. ಪ್ರಕರಣದಲ್ಲಿ ಇನ್ನೂ ಹಲವರು ಇದ್ದು, ಅವರಿಗೂ ಶಿಕ್ಷೆ ಆಗಬೇಕು. ದೊಡ್ಡ ರಾಜಕಾರಣಿಗಳ ವಿರುದ್ಧ ತನಿಖೆ ವೇಳೆ ಅಡೆತಡೆ ಎದುರಾಗಿತ್ತು. ನನ್ನ ಜತೆ ಕೆಲಸ ಮಾಡಿದ ಅಧಿಕಾರಿಗಳಿಗೆ ಸಂತೃಪ್ತಿ ಸಿಕ್ಕಂತಾಗುತ್ತೆ. ನನಗೂ ಬಹಳ ಖುಷಿ ತಂದಿದೆ. ನ್ಯಾಯಾಂಗದ ಶಕ್ತಿ ತೋರಿಸಿದೆ.
| ನ್ಯಾ. ಸಂತೋಷ್ ಹೆಗ್ಡೆ ಮಾಜಿ ಲೋಕಾಯುಕ್ತರು