ಪ್ರಶ್ನೆ: ಪೊಲೀಸ್ ಇಲಾಖೆಯಲ್ಲಿ ಶಾಖಾಧೀಕ್ಷಕನಾಗಿದ್ದ ನಾನು, 31-07-2006ರಂದು ವಯೋ ನಿವೃತ್ತಿಹೊಂದಿದ್ದೇನೆ. ನನ್ನ ಮೇಲೆ ಇಲಾಖಾ ವಿಚಾರಣೆ ಇದ್ದ ಕಾರಣ ಪಿಂಚಣಿಯನ್ನು ಮಾತ್ರ ನಿವೃತ್ತಿ ದಿನಾಂಕದಿಂದ ಮಂಜೂರು ಮಾಡಲಾಗಿದೆ. ಆದರೆ, ಡಿಸಿಆರ್ಜಿ ಹಾಗೂ ಸಿವಿಪಿ ಹಣ ತಡೆ ಹಿಡಿದು, ಇಲಾಖಾ ವಿಚಾರಣೆ ಮುಗಿದ ಬಳಿಕ ದಂಡ ವಿಧಿಸಿದ್ದಾರೆ. ದಂಡವನ್ನು ನಾನು ಒಂದೇ ಕಂತಿನಲ್ಲಿ ಸರ್ಕಾರಕ್ಕೆ ಪಾವತಿಸಿದ್ದೇನೆ. ಮಹಾಲೇಖಾಪಾಲರು ತಡೆ ಹಿಡಿದ ಸಿವಿಪಿ ಹಾಗೂ ಡಿಸಿಆರ್ಜಿ ಹಣವನ್ನು ದಿನಾಂಕ 25-02-2016 ರಂದು ಬಿಡುಗಡೆ ಮಾಡಿ ಪಾವತಿಸಲಾಗಿದೆ. ಪ್ರತಿ ತಿಂಗಳ ಪಿಂಚಣಿ ಪಾವತಿಯಲ್ಲಿ ಸಿವಿಪಿ ಕಂತಿನ ಹಣ ಕಡಿತಗೊಳಿಸುತ್ತಿದ್ದು, ಇದು ದಿನಾಂಕ 23-05-2031 ರವರೆಗೆ ಕಡಿತ ಗೊಳಲಿದೆ. ನಾನು ವಯೋನಿವೃತ್ತಿ ಹೊಂದಿ 15 ವರ್ಷ ಹಾಗೂ ನನ್ನ ವಯಸ್ಸು 74 ವರ್ಷ ಆಗಿದೆ. ನನ್ನ ಸ್ಚಇಚ್ಛೆಯಿಂದ ಬಾಕಿ ಸಿವಿಪಿ ಹಣವನ್ನು ಸರ್ಕಾರಕ್ಕೆ ಒಂದೇ ಕಂತಿನಲ್ಲಿ ಮರು ಪಾವತಿಸಲು ಸಿದ್ಧನಿದ್ದೇನೆ. ಈ ಬಗ್ಗೆ ಸಲಹೆ, ಸೂಚನೆಗಳು ತಿಳಿಸಿ.
| ಚಂದ್ರಕಾಂತ, ಕಲಬುರಗಿ
ಉತ್ತರ: ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 376(2) ರಂತೆ 1/3 ಭಾಗದಷ್ಟು ನಿವೃತ್ತಿ ವೇತನವನ್ನು ಪರಿವರ್ತನೆ ಮಾಡಿಕೊಳ್ಳಲು ತನಗೆ ಇಚ್ಛೆ ಇದೆಯೇ, ಇಲ್ಲವೇ ಎಂಬುದನ್ನು ಸರ್ಕಾರಿ ನೌಕರ ಘೋಷಿಸಬೇಕು. ಘೋಷಣೆ ಇಲ್ಲದಿದ್ದ ಪ್ರಕರಣಗಳಲ್ಲಿ ಮಹಾಲೇಖಪಾಲರು ನಿಯಮಾನುಸಾರ ಗರಿಷ್ಠ ಪರಿವರ್ತನೆ ಮಾಡಿಕೊಳ್ಳಲು ಭಾವಿಸಿ, ಸಿವಿಪಿಯನ್ನು ಮಂಜೂರು ಮಾಡುತ್ತಾರೆ. ಈ ಮೊಬಲಗನ್ನು 15 ವರ್ಷಗಳ ಅವಧಿಯವರೆಗೆ ಪಿಂಚಣಿಯಿಂದ ಕಟಾವು ಮಾಡಲಾಗುತ್ತದೆ. ಈ 15 ವರ್ಷಗಳೊಳಗೆ ನಿವೃತ್ತಿದಾರನು ನಿಧನವಾದರೆ ಕುಟುಂಬ ಪಿಂಚಣಿಯಿಂದ ಕಡಿತಗೊಳಿಸಲಾಗುವುದಿಲ್ಲ. ಆದರೆ ಸರ್ಕಾರಿ ನಿವೃತ್ತಿದಾರನು ಸಿವಿಪಿ ಮೊಬಲಗನ್ನು ಈ ಅವಧಿಗೆ ಮುಂಚೆಯೇ ಸರ್ಕಾರಕ್ಕೆ ಹಿಂತಿರುಗಿಸಲು ನಿಯಮಾವಳಿಯಲ್ಲಿ ಅವಕಾಶವಿರುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ "ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು' ಪುಸ್ತಕ ನೋಡಬಹುದು.