ಹೈದರಾಬಾದ್: ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ, ಸುಕುಮಾರ್ ನಿರ್ದೇಶನದ ಬಹು ನಿರೀಕ್ಷಿತ ಪುಷ್ಪ-2 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಈವರೆಗೆ ಸಿನಿಮಾದ ಬಿಡುಗಡೆ ದಿನಾಂಕ, ಫಸ್ಟ್ ಲುಕ್ ಹಾಗೂ ಟೀಸರ್ ಚಿತ್ರ ಹೆಚ್ಚು ಸದ್ದು ಮಾಡಿತ್ತು. ಇದೀಗ ಚಿತ್ರದ ಬಗೆಗಿನ ಮೇಜರ್ ಅಪ್ಡೇಟ್ ಒಂದು ಹೊರಬಿದ್ದಿದ್ದು, ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಗರಿಗೆದರಿದೆ.
ಪುಷ್ಪ-2 ಚಿತ್ರದ ಪಾತ್ರವರ್ಗ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹೊಸ ಕಲಾವಿದರು ಎಂಟ್ರಿ ಕೊಡುತ್ತಿದ್ದಾರೆ. ಇದೀಗ ಕೇಳಿ ಬಂದಿರುವ ಹೊಸ ಮಾಹಿತಿ ಪ್ರಕಾರ ಬಾಲಿವುಡ್ನ ಖ್ಯಾತ ನಟ ಸಂಜಯ್ ದತ್ ಪುಷ್ಪ-2 ಚಿತ್ರತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಅದಕ್ಕೆ ಪುಷ್ಠಿ ನೀಡುವಂತೆ ಹಲವಾರು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮೊದಲಿನಿಂದಲೂ ಪುಷ್ಪ ಮತ್ತು ಕೆಜಿಎಫ್ ತಂಡದ ನಡುವೆ ಹೋಲಿಕೆ ಮತ್ತು ಸಾಮ್ಯತೆ ಕಾಣಿಸುತ್ತಿದೆ. ಕೆಜಿಎಫ್ ಗೆದ್ದ ಬಳಿಕ ಅದರ ಮುಂದಿನ ಭಾಗದಲ್ಲಿ ಬಾಲಿವುಡ್ನ ಕಲಾವಿದರನ್ನು ಸೇರಿಸಿಕೊಳ್ಳಲಾಗಿತ್ತು. ರವೀನಾ ಟಂಡನ್, ಸಂಜಯ್ ದತ್ ಅವರ ಆಗಮನದಿಂದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಮೆರುಗು ಹೆಚ್ಚಿತು. ಈಗ ಪುಷ್ಪ 2 ಚಿತ್ರತಂಡ ಕೂಡ ಅದೇ ಸೂತ್ರವನ್ನು ಅನುಸರಿಸಲಿದೆಯಾ ಎಂಬ ಅನುಮಾನ ಮೂಡಲು ಶುರುವಾಗಿದೆ.
ಪುಷ್ಪ-2 ಚಿತ್ರದಲ್ಲಿ ಸಂಜಯ್ ದತ್ ನಟಿಸಲಿದ್ದಾರೆ ಎಂದು ಸುದ್ದಿಯನ್ನು ಚಿತ್ರತಂಡ ಈವರೆಗೆ ಖಚಿತಪಡಿಸಿಲ್ಲ ಅಥವಾ ಯಾವುದೇ ಅಧಿಕೃತ ಪ್ರಕಟಣೆಯನ್ನು ಹೊರಡಿಸಿಲ್ಲ. ಈ ಸಿನಿಮಾ ಮೇಲಿನ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಗೆಬಗೆಯ ಗಾಸಿಪ್ಗಳು ಟಾಲಿವುಡ್ ಅಂಗಳದಲ್ಲಿ ಹರಿದಾಡಲು ಶುರುವಾಗಿದೆ. ಆರೆ ಯಾವುದನ್ನು ನಂಬಬೇಕು, ಯಾವುದನ್ನು ಬಿಡುವುದು ಎಂಬ ಗೊಂದಲ ಅಭಿಮಾನಿಗಳಲ್ಲಿ ಸಹಜವಾಗಿ ಮೂಡಲು ಶುರುವಾಗಿದೆ.