ಕೋಲ್ಕತ: ಸಂದೇಶ್‌ಖಾಲಿ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿಯಾಗಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶಹಜಹಾನ್ ಶೇಖ್ನನ್ನು ಪಶ್ಚಿಮ ಬಂಗಾಳ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ತಲೆಮರೆಸಿಕೊಂಡ 55 ದಿನಗಳ ಬಳಿಕ ಉತ್ತರ 24 ಪರಗಣ ಜಿಲ್ಲೆಯ ಮಿನಖಾನ್ ಏರಿಯಾದಲ್ಲಿ ಆರೋಪಿಯನ್ನು ಬಂಧಿಸಿ, ಬಸಿರ್ಹತ್ಗೆ ಕರೆತರಲಾಗಿದೆ.
ಮಾರ್ಚ್ 1ರಂದು ಪ್ರಧಾನಿ ಮೋದಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಒಂದು ದಿನದ ಮುಂಚೆಯೇ ಆರೋಪಿಯನ್ನು ಬಂಧಿಸಲಾಗಿದೆ. ಶಹಜಹಾನ್ ವಿರುದ್ಧ ಭೂಕಬಳಿಕೆ ಆರೋಪವೂ ಇದೆ. ಇಂದು ಮಧ್ಯಾಹ್ನ 2 ಗಂಟೆಗೆ ಶಹಜಹಾನ್ನನ್ನು ಬಸಿರ್ಹತ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.
ಸಂದೇಶ್‌ಖಾಲಿ ದೌರ್ಜನ್ಯ ಬೆಳಕಿಗೆ ಬಂದ ಬಳಿಕ ಶಹಜಹಾನ್ ಹೆಸರು ಕುಖ್ಯಾತಿ ಪಡೆದಿದೆ. ಅದಕ್ಕೂ ಮುನ್ನ ಈತನ ಹೆಸರು ಪಡಿತರ ಹಗರಣದಲ್ಲಿ ಕೇಳಿಬಂದಿತ್ತು. ಅಂದಹಾಗೆ ಶಹಜಹಾನ್ ಶೇಖ್, ಟಿಎಂಸಿಯ ಪ್ರಬಲ ನಾಯಕರಾಗಿದ್ದು, ಸಂದೇಶ್‌ಖಾಲಿ ಘಟಕದ ಟಿಎಂಸಿ ಅಧ್ಯಕ್ಷರೂ ಆಗಿದ್ದಾರೆ. ಪಡಿತರ ಹಗರಣ ಹಿನ್ನೆಲೆಯಲ್ಲಿ ಕಳೆದ ಜನವರಿ 5 ರಂದು ಶಹಜಹಾನ್ ವಿಚಾರಣೆಗೆಂದು ಅವರ ನಿವಾಸಕ್ಕೆ ಇಡಿ ಅಧಿಕಾರಿಗಳು ತೆರಳಿದಾಗ ಈ ವಿಚಾರ ಮೊದಲೇ ಗೊತ್ತಾಗಿ ಆತ ತಲೆಮರೆಸಿಕೊಂಡಿದ್ದ. ಇಡಿ ದಾಳಿಯ ಸಂದರ್ಭದಲ್ಲಿ ಶಹಜಹಾನ್ ಬೆಂಬಲಿಗರು ಇಡಿ ಅಧಿಕಾರಿಗಳು ಮತ್ತು ಸಿಎಪಿಎಫ್ ಮೇಲೆಯೇ ಹಲ್ಲೆ ನಡೆಸಿದ್ದರು.
ಸಂದೇಶ್‌ಖಾಲಿ ಪ್ರದೇಶದಲ್ಲಿ ವಾಸಿಸುವ ಮಹಿಳೆಯರು ಶಹಜಹಾನ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಆ ಬಳಿಕವಷ್ಟೇ ಶಹಜಹಾನ್ ಹೆಸರು ಮುನ್ನೆಲೆಗೆ ಬಂದಿತು. ಈ ವಿಚಾರವಾಗಿ ಬಿಜೆಪಿ ಸಹ ಪ್ರತಿಭಟನೆ ನಡೆಸಿ, ಶಹಜಹಾನ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿತ್ತು. (ಏಜೆನ್ಸೀಸ್)