ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ 'ಕೃಷ್ಣ' ಎಂದೇ ಫೇಮಸ್ ಆಗಿರುವ ನಟ ಅಜಯ್ ರಾವ್. ನಟನಾಗಿ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಅವರಿಗಿಂದು ಜನ್ಮದಿನದ ಸಂಭ್ರಮ. ಅಜಯ್ ರಾವ್ ಹುಟ್ಟುಹಬ್ಬದ ವಿಶೇಷವಾಗಿ ಯುದ್ಧಕಾಂಡ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿ ಶುಭ ಕೋರಲಾಗಿದೆ. ಈ ಮೂಲಕ ‘ಕೃಷ್ಣ ಲೀಲಾ’ ಸಿನಿಮಾ ನಂತರ ಮತ್ತೊಮ್ಮೆ ನಿರ್ಮಾಣ ಸಾಹಸಕ್ಕೆ ಮುಂದಾಗಿದ್ದಾರೆ ಎನ್ನಬಹುದು.
ಎಕ್ಸ್ಕ್ಯೂಸ್ ಮಿ ಸಿನಿಮಾ ಮೂಲಕ ಅಜಯ್ ರಾವ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾ ಬದುಕಿನಲ್ಲಿ ಇದು ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತು. ಚೊಚ್ಚಲ ಚಿತ್ರದಲ್ಲೇ ಅಭೂತಪೂರ್ವ ಯಶ ಕಂಡ ಅಜಯ್ ಈವರೆಗೆ ಕೆಲವು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ.
2008ರಲ್ಲಿ ತೆರೆಕಂಡ 'ತಾಜ್ ಮಹಲ್' ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡರು. ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಮ್ಯಾರೇಜ್ ಸ್ಟೋರಿ, ಕೃಷ್ಣ ಲೀಲಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಜನ್ಮದಿನದ ಪ್ರಯುಕ್ತ ಯುದ್ಧಕಾಂಡ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದು ಕರಿಕೋಟು ತೊಟ್ಟು ಕೈಯಲ್ಲಿ ಪುಸ್ತಕ ಹಿಡಿದು ಲಾಯರ್ ಅವತಾರದಲ್ಲಿ ಕೃಷ್ಣ ಅಜಯ್ ರಾವ್ ಕಾಣಿಸಿಕೊಂಡಿದ್ದಾರೆ. ʻಯುದ್ಧಕಾಂಡʼ ಚಿತ್ರವನ್ನು ಅಜಯ್ ರಾವ್ ತಮ್ಮದೇ ನಿರ್ಮಾಣ ಸಂಸ್ಥೆ ‘ಶ್ರೀಕೃಷ್ಣ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ಸ್’ ಮತ್ತು ‘ಅಜಯ್ ರಾವ್ ಪ್ರೊಡಕ್ಷನ್ಸ್’ ನಡಿ ನಿರ್ಮಾಣ ಮಾಡುತ್ತಿದ್ದಾರೆ.
ಯುದ್ಧಕಾಂಡ ಚಿತ್ರವನ್ನ ಪವನ್ ಭಟ್ ನಿರ್ದೇಶನ ಮಾಡುತ್ತಿದ್ದಾರೆ. ಕಾರ್ತಿಕ್ ಶರ್ಮಾ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ಈ ಸಿನಿಮಾಗೆ ಪ್ಯಾನ್ ಇಂಡಿಯಾ ತಾರಾಬಳಗವಿರಲಿದೆ. ಸದ್ಯ ಯುದ್ಧಕಾಂಡ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ಮತ್ತೊಂದು ಮತ್ತಷ್ಟು ಮಾಹಿತಿಯೊಂದಿಗೆ ಚಿತ್ರತಂಡ ನಿಮ್ಮ ಮುಂದೆ ಹಾಜರಾಗಲಿದೆ.