ನ್ಯೂಸ್

ನಮ್ಮ ದೇಶದಲ್ಲಿ ಎಲ್ಲದಕ್ಕೂ ಸನಾತನ ಧರ್ಮವೇ ಮೂಲ, ಅವರ ಹೇಳಿಕೆ ನಾನು ಒಪ್ಪಲ್ಲ: ಯದುವೀರ ಒಡೆಯರ್

ಮಂಡ್ಯ: ನಮ್ಮ ನಾಡು, ದೇಶದಲ್ಲಿ ಸನಾತನ ಧರ್ಮ ಎಲ್ಲದಕ್ಕೂ ಮೂಲ. ನಾವು ಅವರ ಹೇಳಿಕೆ ಒಪ್ಪುವುದಿಲ್ಲ, ಧರ್ಮಕ್ಕೆ ಗೌರವ ಕೊಡಬೇಕು ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.

ಇಂದು ಮಂಡ್ಯದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ನೀಡಿದ್ದ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಈ ರೀತಿ ಪ್ರತಿಕ್ರಿಯೆ ನೀಡಿದರು. ಧರ್ಮದ ಬಗ್ಗೆ ಆ ರೀತಿ ಮಾತನಾಡುವುದು ತಪ್ಪು. ಎಲ್ಲ ಧರ್ಮಕ್ಕೂ ಒಂದು ಗೌರವ, ಮರ್ಯಾದೆ ಕೊಡಬೇಕು ಎಂದು ಅವರು ಹೇಳಿದರು.

ಪ್ರತಿ ವರ್ಷದಂತೆ ಈ ವರ್ಷವೂ ಮೈಸೂರಿನಲ್ಲಿ ವಿಧಿವಿಧಾನಗಳ ಪ್ರಕಾರ ದಸರಾ ಆಚರಣೆ ಆಗಲಿದೆ ಎಂದ ಅವರು, ಮಹಿಷ ದಸರಾ ಆಚರಣೆ ವಿಚಾರವಾಗಿ, 'ಇದರ ಬಗ್ಗೆ ನನ್ನ ಅಭಿಪ್ರಾಯ ಇಲ್ಲ. ಸಂವಿಧಾನದ ಪ್ರಕಾರ ಯಾರು ಬೇಕಾದರೂ ಏನು ಬೇಕಾದರೂ ಅನುಸರಿಸಬಹುದು' ಎಂದರು.