ನ್ಯೂಸ್

ಇದು ಮಾಸ್ಟರ್​ಪೀಸ್​!; ಸಿಂಪಲ್ ಸ್ಟಾರ್​ ಸಿನಿಮಾ ಹೊಗಳಿದ ನಟಿ ಸಮಂತಾ

ಆಂಧ್ರಪ್ರದೇಶ: ಇತ್ತೀಚೆಗಷ್ಟೇ ಟಾಲಿವುಡ್​ ಅಂಗಳದಲ್ಲಿ ಬಿಡುಗಡೆಗೊಂಡ ಪ್ಯಾನ್ ಇಂಡಿಯಾ 'ಖುಷಿ' ಚಿತ್ರದ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿದ ಸ್ಟಾರ್​ ನಟಿ ಸಮಂತಾ ರುತ್ ಪ್ರಭು, ಇದೀಗ ಸ್ಯಾಂಡಲ್​ವುಡ್​ನ ಸಿಂಪಲ್ ಸ್ಟಾರ್ ನಟನೆಯ​ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್​ ಎ ಸಿನಿಮಾ ವೀಕ್ಷಿಸಿ, ಚಿತ್ರತಂಡಕ್ಕೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗದ ಸಿಂಪಲ್​ ಸ್ಟಾರ್, ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ರುಕ್ಮಿಣಿ ವಸಂತ್​ ಮುಖ್ಯಭೂಮಿಕೆಯಲ್ಲಿ ಅಭಿನಯದ ಸೂಪರ್​ ಹಿಟ್ ಸಿನಿಮಾ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಎ ಕನ್ನಡ ಸಿನಿಪ್ರೇಕ್ಷಕರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು. ಪಾಸಿಟಿವ್ ಪ್ರತಿಕ್ರಿಯೆಯೊಂದಿಗೆ ಇಂದಿಗೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸದ್ಯ ಚಿತ್ರವನ್ನು ವೀಕ್ಷಣೆ ಮಾಡಿದ 'ಖುಷಿ' ನಟಿ, ಸಿನಿಮಾ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಖಂಡಿತವಾಗಿ ಇದೊಂದು ಮಾಸ್ಟರ್​ಪೀಸ್​, ಎಲ್ಲರೂ ನೋಡಲೇಬೇಕಾದ ಸಿನಿಮಾ. ಈ ಸುಂದರ ಚಿತ್ರತಂಡಕ್ಕೆ ನನ್ನ ದೊಡ್ಡ ಅಭಿನಂದನೆಗಳು" ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದರೊಟ್ಟಿಗೆ ಪ್ರತ್ಯೇಕವಾಗಿ ನಟಿ ರುಕ್ಮಿಣಿ ವಸಂತ್​ ಅವರ ಫೋಟೋ ಹಾಕಿ, "ರುಕ್ಮಿಣಿ ಯೂ ಬ್ಯೂಟಿ, ಎಂಥ ಅದ್ಭುತ ಪ್ರದರ್ಶನ ನಿಮ್ಮದು. ಪ್ರೀತಿಯ ಅಪ್ಪುಗೆ ನಿಮಗೆ" ಎಂದು ತಮ್ಮ ಮನದಾಳದ ಮಾತನ್ನು ಸಾಮಾಜಿಕ ಜಾಲತಾಣದ ಮುಖೇನ ಹಂಚಿಕೊಂಡಿದ್ದಾರೆ.

ಹೇಮಂತ್ ಎಂ. ರಾವ್ ನಿರ್ದೇಶನದ 'ಸಪ್ತ ಸಾಗರದಾಚೆ ಏಲ್ಲೋ' ಸಿನಿಮಾ ಇದೀಗ ತೆಲುಗಿನ ಆವೃತ್ತಿಯಲ್ಲಿ ಸಿನಿಪ್ರೇಕ್ಷಕರ ಮುಂದೆ ಹಾಜರಾಗಲಿದ್ದು, ತೆಲುಗು ಭಾಷೆಯಲ್ಲಿ 'ಸಪ್ತ ಸಾಗರಲು ಧಾಟಿ' ಎಂಬ ಟೈಟಲ್​ನಡಿ ಇದೇ ಸೆ.22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ,(ಏಜೆನ್ಸೀಸ್).