ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಬಹು ರ್ಚಚಿತ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ -2015ರ ದತ್ತಾಂಶಗಳ ಅಧ್ಯಯನ ವರದಿಯನ್ನು ಸಚಿವ ಸಂಪುಟದ ಎದುರು ಮಂಡಿಸಲು ಸರ್ಕಾರ ನಿರ್ಧರಿಸಿದೆ. ಈ ವರದಿ ಬಗ್ಗೆ ಸಂಪುಟದ ನಿರ್ಣಯ ಏನಿರಬಹುದೆಂಬುದರ ಜತೆಗೆ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ಇತರ ವರದಿಗಳ ಪಾಡೇನು ಎಂಬುದೂ ಕುತೂಹಲ ಮೂಡಿಸಿದೆ.
ಜಾತಿಗಣತಿ ಎಂದೇ ಕರೆಯುವ ದತ್ತಾಂಶಗಳ ಅಧ್ಯಯನ ವರದಿ ಆಶಯ ಈಡೇರಬೇಕಾದರೆ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ಹತ್ತಾರು ವರದಿಗಳ ಜಾರಿ ಅಗತ್ಯ. ಆದ್ದರಿಂದ ಸರ್ಕಾರ ಈ ವರದಿಗಳ ಬಗ್ಗೆ ಯಾವ ನಿರ್ಧಾರಕ್ಕೆ ಬರಲಿದೆ ಎಂಬುದು ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಚರ್ಚೆಗೆ ಒಳಗಾಗಿದೆ. ಗುರುವಾರದ ಸಚಿವ ಸಂಪುಟ ಸಭೆಯ ಮುಖ್ಯ ಕಾರ್ಯಸೂಚಿಯಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ವರದಿ ಮಂಡನೆಯ ವಿಷಯ ಮಾತ್ರ ಇದೆ. ಸಾಮಾಜಿಕ, ಶೈಕ್ಷಣಿಕ ವರದಿಯು ಹಿಂದುಳಿದ ವರ್ಗಗಳ ಸ್ಥಿತಿಗತಿ ಹಾಗೂ ಅಂದಾಜು ಜನ ಸಂಖ್ಯೆಯ ಬಗ್ಗೆ ವಾಸ್ತವಿಕ ಅಂಕಿಅಂಶ ನೀಡುತ್ತದೆ.
ಈ ವರದಿ ಒಪ್ಪಿದ ನಂತರ ಹಿಂದುಳಿದ ವರ್ಗಗಳ ಪರಿಸ್ಥಿತಿ ಸುಧಾರಿಸಲು ಸರ್ಕಾರದ ಮುಂದಿರುವ ಇತರ ವರದಿ ಜಾರಿಗೊಳ್ಳಬೇಕು. ಏಕೆಂದರೆ ವಿವಿಧ ಜಾತಿ ಮತ್ತು ವರ್ಗಗಳ ಮೀಸಲಾತಿ ಪ್ರಮಾಣ, ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಹಾಸ್ಟೆಲ್ ಸಮಸ್ಯೆ, ಖಾಸಗಿ ವಲಯದಲ್ಲೂ ಮೀಸಲಾತಿ, ಹಿಂದುಳಿದ ಜಾತಿಗಳ ಸಾಲಿಗೆ ಸೇರ್ಪಡೆ- ಹೀಗೆ ಅನೇಕ ವಿಷಯಗಳಿಗೆ ಸಂಬಂಧಿಸಿದ ವರದಿಗಳು ಇವಾಗಿವೆ. ಮೀಸಲಾತಿ ಪ್ರಮಾಣವನ್ನು ತಮಿಳುನಾಡು ಮಾದರಿಯಲ್ಲಿ ಹೆಚ್ಚಿಸಬೇಕೆಂಬ ಚರ್ಚೆಯೂ ಇದೆ.
ರಾಜಕೀಯ ಕುತೂಹಲ: ಶೈಕ್ಷಣಿಕ, ಸಾಮಾಜಿಕ ವರದಿ ಮಂಡನೆ ವಿಚಾರದಲ್ಲಿ ಪರ, ವಿರೋಧ ಅಭಿಪ್ರಾಯ ವ್ಯಕ್ತವಾಗಿವೆ. ಕೆಲ ಸಮುದಾಯಗಳು ವರದಿ ಜಾರಿಗೆ ಒತ್ತಡ ಹಾಕಿವೆ. ಮತ್ತಷ್ಟು ಸಮುದಾಯಗಳು ವಿರೋಧ ಮಾಡಿವೆ. ಆದ್ದರಿಂದ ಸಚಿವ ಸಂಪುಟ ಯಾವ ನಿರ್ಧಾರಕ್ಕೆ ಬರಲಿದೆ ಎಂಬುದು ಕುತೂಹಲದ ಕೇಂದ್ರಬಿಂದುವಾಗಿದೆ. ವರದಿ ಸಚಿವ ಸಂಪುಟದಲ್ಲಿ ಮಂಡನೆಯಾದ ಬಳಿಕ ಸಂಪುಟ ಉಪ ಸಮಿತಿ ರಚಿಸಿ ಅಧ್ಯಯನ ಮಾಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಆ ನಂತರ ಮುಂದಿನ ತೀರ್ಮಾನ ಆಗಬಹುದೆಂಬ ಲೆಕ್ಕಾಚಾರ ನಡೆಯುತ್ತಿದೆ.
ತಲೆಕೆಳಗಾಗಲಿವೆ ಲೆಕ್ಕಾಚಾರ?: ಜಾತಿ ಗಣತಿ ಹೊರಬಂದರೆ ಇದುವರೆಗಿನ ಜಾತಿ ಲೆಕ್ಕಾಚಾರಗಳು ತಲೆಕೆಳಗಾಗಲಿವೆ. ಆದ್ದರಿಂದ ಆಡಳಿತ ಪಕ್ಷದಲ್ಲಿಯೇ ಕೆಲ ಮುಖಂಡರು ವರದಿ ಬಿಡುಗಡೆಗೆ ವಿರೋಧ ಮಾಡುತ್ತಿದ್ದಾರೆ ಎಂಬ ಮಾತುಗಳಿವೆ.
ಚುನಾವಣೆ ಉದ್ದೇಶ: ಮುಂದಿನ ಪಂಚಾಯತ್, ಬಿಬಿಎಂಪಿ ಮತ್ತು ಮೂರು ವರ್ಷಗಳ ನಂತರ ಎದುರಾಗುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಬಂಧ ಸೋಷಿಯಲ್ ಇಂಜಿನಿಯರಿಂಗ್ ಮಾಡುವುದಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಅನುಕೂಲ ವಾಗಲಿದೆ ಎಂಬ ವಾದ ಪಕ್ಷ ಹಾಗೂ ಸರ್ಕಾರದಲ್ಲಿದೆ.
ಮೀಸಲು ಪ್ರಮಾಣ ಹೆಚ್ಚಳ?: ಮೀಸಲಾತಿ ಪ್ರಮಾಣವನ್ನು ತಮಿಳುನಾಡಿನಲ್ಲಿ ಶೇ.68ಕ್ಕೆ ಹೆಚ್ಚಿಸಿದಂತೆ ರಾಜ್ಯದಲ್ಲಿ ಶೇ.70ಕ್ಕೆ ಹೆಚ್ಚಿಸಲು ತೀರ್ವನಿಸಲಾಗಿತ್ತು. ಆ ಬಗ್ಗೆ ಸರ್ಕಾರ ಏನು ಮಾಡಲಿದೆ ಎಂಬ ಪ್ರಶ್ನೆಯೂ ಇದೆ. ಹಿಂದುಳಿದ ವರ್ಗಗಳ ಆಯೋಗವೇ ಈ ಬಗ್ಗೆ ಶಿಫಾರಸು ಸಹ ಮಾಡಿದೆ.
ಜಾತಿಗಣತಿ ವರದಿ ನೋಟ
ಜಾತಿಯ ಪ್ರಮಾಣ (ಹಿಂದೆ ಸೋರಿಕೆ ಆಗಿರುವ ವರದಿ ಪ್ರಕಾರ)
ವರದಿಯಲ್ಲಿ ಏನಿದೆ?
ಯಾರ ಬೇಡಿಕೆ ಏನು?
ಸರ್ಕಾರದ ಮುಂದಿರುವ ವರದಿ
ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ 2015ರ ದತ್ತಾಂಶಗಳ ಅಧ್ಯಯನ ವರದಿಯನ್ನು ಸಂಪುಟದಲ್ಲಿ ಅಂಗೀಕರಿಸಲು ಸರ್ಕಾರ ಸಿದ್ಧವಾಗಿದೆ. ವರದಿಯ ಅಂಗೀಕಾರ ಅಥವಾ ವಿಧಾನಮಂಡಲದಲ್ಲಿ ಮಂಡಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗುವುದು.
| ಶಿವರಾಜ ತಂಗಡಗಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ