ನ್ಯೂಸ್

ಬಿಗ್​ಬಾಸ್​​ ಹೋಸ್ಟ್​​ ಮಾಡಲು ಸಲ್ಮಾನ್​ ಖಾನ್​ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?; ತಿಳಿದ್ರೆ ಅಬ್ಬಾಬ್ಬ ಅಂತೀರಾ.. | Big Boss

Webdesk - Kavitha Gowda

ಮುಂಬೈ: ಬಾಲಿವುಡ್​ನಲ್ಲಿ ಸಿನಿಮಾಗಳಲ್ಲಿ ಮಾತ್ರವಲ್ಲ ಇತ್ತೀಚೆಗೆ ಟೆಲಿವಿಷನ್​​ನಲ್ಲೂ ಸ್ಟಾರ್​ ಸೆಲಿಬ್ರಿಟಿಗಳು ಉತ್ತಮ ಸಂಭಾವನೆ ಪಡೆಯುತ್ತಾರೆ ಎಂಬ ಸುದ್ದಿ ಬಿಟೌನ್​ ಅಂಗಳದಲ್ಲಿ ಹರಿದಾಡುತ್ತಿದೆ. ಸದ್ಯ ಬಿಗ್​ಬಾಸ್(Big Boss)-18 ​​ ಶೋ ಇಂದಿನಿಂದ (ಅಕ್ಟೋಬರ್​​ 6) ಆರಂಭವಾಗುತ್ತಿದೆ. ಈ ಕಾರ್ಯಕ್ರಮವನ್ನು ಬಜರಂಗಿ ಭಾಯಿಜಾನ್​ ಸಲ್ಲು ಹೋಸ್ಟ್​ ಮಾಡುತ್ತಾರೆ. ಕಾರ್ಯಕ್ರಮವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈ ಬಾರಿಯ ಕಾರ್ಯಕ್ರಮದ ಥೀಮ್ ತುಂಬಾ ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ಸ್ಪರ್ಧಿಗಳ ಭವಿಷ್ಯವನ್ನು ನೋಡಲಿದ್ದಾರೆ. ಎಂದಿನಂತೆ ಈ ಬಾರಿಯೂ ಬಿಗ್ ಬಾಸ್ ಮನೆಯ ಒಳಾಂಗಣ ಸಂಪೂರ್ಣ ಬದಲಾಗಿದೆ. ಮನೆಯ ಬೆರಗುಗೊಳಿಸುವ ಸೌಂದರ್ಯವನ್ನು ನೋಡಿದರೆ ನೀವೂ ಆಶ್ಚರ್ಯ ಪಡುತ್ತೀರಿ. ಕಳೆದ ಬಾರಿಯಂತೆ ಈ ಬಾರಿಯೂ ಬಿಗ್​ಬಾಸ್​​ 18 ಪ್ರದರ್ಶನವು ಒಟಿಟಿಯಲ್ಲಿ ವೀಕ್ಷಿಸಲು ಅವಕಾಶವಿದೆ ಆದರೆ ಉಚಿತವಾಗಿ ಅಲ್ಲ ನೀವು ಚಂದಾದಾರರಾದರೆ ಮಾತ್ರ ಒಟಿಟಿಯಲ್ಲಿ ನೋಡಬಹುದು.

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯ ಮೊದಲ ಚಿತ್ರಗಳು ಅನಾವರಣಗೊಂಡಿದ್ದರೂ, ಸ್ಪರ್ಧಿಗಳ ಹೆಸರು ಮಾತ್ರ ರಹಸ್ಯವಾಗಿ ಉಳಿದಿವೆ. ಊಹಾಪೋಹಗಳಿವೆ ಆದರೆ ಇವರೇ ಸ್ಪರ್ಧಿಗಳು ಎಂಬ ಅಧಿಕೃತ ಮಾಹಿತಿ ಇಲ್ಲ. ಸ್ಪರ್ಧಿಗಳ ಹೆಸರು ಒಂದು ಸುದ್ದಿಯಾದರೆ ಅದಕ್ಕಿಂತ ಹೆಚ್ಚಾಗಿ ಸಲ್ಮಾನ್​ ಖಾನ್​ ಪಡೆಯುತ್ತಿರುವ ಸಂಭಾವನೆ ಸೌಂಡ್​ ಮಾಡುತ್ತಿದೆ.

ಬಿಗ್ ಬಾಸ್ ಒಟಿಟಿ 3 ಕಾರ್ಯಕ್ರಮವನ್ನು ನಟ ಅನಿಲ್ ಕಪೂರ್ ನಡೆಸಿಕೊಟ್ಟಿದ್ದು ಗೊತ್ತೆ ಇದೆ. ಆದರೆ ಸಲ್ಮಾನ್ ಖಾನ್ ಗೈರು ಹಾಜರಾಗಿದ್ದರಿಂದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಹಾಗೂ ಬಿಗ್​ಬಾಸ್​​ ಕಾರ್ಯಕ್ರಮವನ್ನು ಸಲ್ಮಾನ್​ ಖಾನ್​​​ ಹೋಸ್ಟ್ ಮಾಡದಿದ್ದರೆ ನಾವು ವೀಕ್ಷಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಫ್ಯಾನ್ಸ್​ ಬೇಡಿಕೆ ಮೇರೆಗೆ ಈ ಬಾರಿ ಸಲ್ಮಾನ್​ ಖಾನ್​ ಕಾರ್ಯಕ್ರಮವನ್ನು ನಡೆಸಿಕೊಡಲು ಒಪ್ಪಿದ್ದಾರೆ. ಆದರೆ ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡಲು ಸಲ್ಮಾನ್ ಖಾನ್ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಗೊತ್ತಾ?

ಸಲ್ಮಾನ್ ಖಾನ್ ಒಂದೂವರೆ ದಶಕದಿಂದ ಬಿಗ್​​​​ಬಾಸ್‌ನ ನಿರೂಪಕರಾಗಿದ್ದಾರೆ. ಸಲ್ಮಾನ್​ ಖಾನ್​​ ಕಳೆದ ಸೀಸನ್​ನಿಂದ ಸಂಭಾವನೆ ಹೆಚ್ಚಿಸಿರುವುದಾಗಿ ಪ್ರೊಡಕ್ಷನ್​ ಮೂಲಗಳು ತಿಳಿಸಿರುವುದಾಗಿ ಹಿಂದೂಸ್ಥಾನ್​ ಟೈಮ್ಸ್​​ ವರದಿ ಮಾಡಿದೆ. ಹಿಂದಿನ ಸೀಸನ್‌ನಂತೆ ಈ ಸೀಸನ್ 15 ವಾರಗಳ ಕಾಲ ನಡೆದರೆ, ನಟ ಸುಮಾರು 250 ಕೋಟಿ ರೂಪಾಯಿ ಗಳಿಸಲು ಸಿದ್ಧರಾಗಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಈ ಬಾರಿ ಸಲ್ಮಾನ್ ಖಾನ್ ಕಾರ್ಯಕ್ರಮವನ್ನು ಆಯೋಜಿಸಲು ತಮ್ಮ ಸಂಭಾವನೆಯನ್ನು ಶೇ.10ರಷ್ಟು ಹೆಚ್ಚಿಸಿದ್ದು, ತಿಂಗಳಿಗೆ 60 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಟೆಲಿವಿಷನ್​ ಕಾರ್ಯಕ್ರಮ ನಿರೂಪಕರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಸಲ್ಮಾನ್​ ಖಾನ್​ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)