ತೆರೆಮೇಲೆ ಸೂಪರ್ಸ್ಟಾರ್ ಆಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ತೆರೆ ಹಿಂದೆಯೂ ಸೂಪರ್ಸ್ಟಾರ್. ಬಿಯಿಂಗ್ ಹ್ಯೂಮನ್ ಸಂಸ್ಥೆ ಮೂಲಕ ಈಗಾಗಲೇ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅವರು, ಇದೀಗ ಇನ್ನೊಂದು ಮಹತ್ತರವಾದ ಕೆಲಸಕ್ಕೆ ಕೈ ಹಾಕಿದ್ದಾರೆ.
ಕೆಲ ವರ್ಷಗಳ ಹಿಂದಷ್ಟೇ ಕೊಲ್ಲಾಪುರ ಜಿಲ್ಲೆಯ ಕಿದ್ರಾಪುರ ಗ್ರಾಮವನ್ನು ಸಲ್ಮಾನ್ ದತ್ತು ಪಡೆದುಕೊಂಡಿದ್ದರು. ಆದರೆ, ಕಳೆದ ವರ್ಷ ಆ ಗ್ರಾಮ ನೆರೆಹಾವಳಿಯಿಂದ ಅಕ್ಷರಶಃ ನೀರಾಗಿತ್ತು. ಮನೆ ಕಳೆದುಕೊಂಡು ಸಾಕಷ್ಟು ಕುಟುಂಬಗಳು ಬೀದಿಗೆ ಬಂದಿದ್ದವು. ಆವತ್ತೇ ಮನೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದರು. ಆವತ್ತು ಕೊಟ್ಟ ಮಾತಿನಂತೆ ಸಲ್ಮಾನ್ ಖಾನ್ ಮೊದಲ ಹಂತವಾಗಿ 70 ಮನೆಗಳನ್ನು ನಿರ್ಮಾಣ ಮಾಡಿ ಕೊಡುವ ಜವಾಬ್ದಾರಿ ಹೊತ್ತಿದ್ದಾರೆ.
ಇತ್ತೀಚೆಗಷ್ಟೇ ಆ ಗ್ರಾಮದಲ್ಲಿ ಮನೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗಿದ್ದು, ಸರ್ಕಾರದ ಗಮನಕ್ಕೂ ತರಲಾಗಿತ್ತು. ಇದೀಗ ಪ್ರತಿ ಮನೆ ನಿರ್ಮಾಣಕ್ಕೆ ಸರ್ಕಾರದಿಂದ 95ಸಾವಿರ ಅನುದಾನ ಬಿಡುಗಡೆಯಾಗಿದ್ದು, ಇನ್ನುಳಿದ ಮೊತ್ತವನ್ನು ಸಲ್ಮಾನ್ ಖಾನ್ ಅವರ ಬಿಯಿಂಗ್ ಹ್ಯೂಮನ್ ಸಂಸ್ಥೆ ಭರಿಸಲಿದೆ.
ಪ್ರತಿ ಮನೆಯೂ 250 ಚದರ ಅಡಿಯಲ್ಲಿ ಸಿದ್ಧವಾಗಲಿದ್ದು, ಸಲ್ಮಾನ್ ಖಾನ್ ಅವರ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಡಿ ಗ್ರಾಮದ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ಧನ್ಯವಾದವನ್ನು ಅರ್ಪಿಸಿದ್ದಾರೆ. (ಏಜೆನ್ಸೀಸ್)