ನವದೆಹಲಿ: ಇತ್ತೀಚೆಗಷ್ಟೇ ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವ, ಎನ್ಸಿಪಿ ನಾಯಕ ಬಾಬಾ ಸಿದ್ದಿಕಿಯನ್ನು ಹತ್ಯೆಗೈದ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ, ತನ್ನ ಮುಂದಿನ ಟಾರ್ಗೆಟ್ ಅನ್ನು ಬಾಲಿವುಡ್ ಹಿರಿಯ ನಟ ಸಲ್ಮಾನ್ ಖಾನ್ (Bulletproof Car) ಮೇಲಿಟ್ಟಿರುವುದು ಇದೀಗ ಎಲ್ಲರಿಗೂ ತಿಳಿದಿರುವ ವಿಷಯವೇ. ನಟನ ಕೊಲೆ ಸಂಚಿಗೆ ದೊಡ್ಡ ಬೇಡಿಕೆಯಿಟ್ಟಿದ್ದ ಲಾರೆನ್ಸ್ ಗ್ಯಾಂಗ್, ಬರೋಬ್ಬರಿ 25 ಲಕ್ಷ ರೂ. ಹಣದ ಜತೆಗೆ ನಾನಾ ಬಗೆಯ ಗನ್ಗಳ ಮೊರೆ ಹೋಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಅ.18ರಂದು ನವಿ ಮುಂಬೈ ಪೊಲೀಸರು ತಾವು ಸಲ್ಲಿಸಿದ ಚಾರ್ಚ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಈ ಎಲ್ಲಾ ಬೆಳವಣಿಗೆಯ ಮಧ್ಯೆಯೇ ಬಿಷ್ಣೋಯಿ ಗ್ಯಾಂಗ್ನಿಂದ ಸಲ್ಮಾನ್ ಖಾನ್ಗೆ ಮತ್ತೆ ಕೊಲೆ ಬೆದರಿಕೆ ಕರೆ ಬಂದಿದ್ದು, 5 ಕೋಟಿ ರೂ. ಕೊಟ್ಟರೆ ಮಾತ್ರ ನಟನನ್ನು ಉಳಿಸುತ್ತೇವೆ. ಇಲ್ಲವಾದರೆ, ಇತ್ತೀಚೆಗಷ್ಟೇ ನಾವು ಗುಂಡಿಕ್ಕಿ ಕೊಂದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಗಿಂತ ಸಲ್ಮಾನ್ ಸಾವು ಕೆಟ್ಟದಾಗಿರಲಿದೆ ಎಂದು ಗ್ಯಾಂಗ್ ಎಚ್ಚರಿಕೆ ರವಾನಿಸಿದೆ.
ಸದ್ಯ ಸಲ್ಮಾನ್ ಖಾನ್ಗೆ ಬಿಷ್ಣೋಯಿ ಗ್ಯಾಂಗ್ ನೀಡಿರುವ ಮತ್ತೊಂದು ಕೊಲೆ ಬೆದರಿಕೆ ಕರೆ ಇದೀಗ ನವಿ ಮುಂಬೈ ಪೊಲೀಸರನ್ನು ಹೈಅಲರ್ಟ್ ಆಗುವಂತೆ ಮಾಡಿದೆ. ನಟನಿಗೆ ಕೊಡಬೇಕಾದ ಬಿಗಿ ಭದ್ರತೆಯನ್ನು ಈಗಾಗಲೇ ಒದಗಿಸಿರುವ ಪೊಲೀಸ್ ಅಧಿಕಾರಿಗಳು, ಆದಷ್ಟು ಮುನ್ನೆಚ್ಚರಿಕೆ ವಹಿಸಲು ಸಲ್ಮಾನ್ ಮತ್ತು ಅವರ ಕುಟುಂಬಕ್ಕೆ ತಿಳಿಸಿದೆ. ಇದೆಲ್ಲದರ ನಡುವೆ ಇದೀಗ ದಿಢೀರ್ ನಿರ್ಧಾರ ಕೈಗೊಂಡಿರುವ ಸಲ್ಮಾನ್ ಖಾನ್, ತಮ್ಮ ಜೀವ ಉಳಿಸಿಕೊಳ್ಳುವ ಹಿನ್ನಲೆ ದುಬೈ ಮೂಲದ 2 ಕೋಟಿ ರೂ. ಮೌಲ್ಯದ ನಿಸ್ಸಾನ್ ಬುಲೆಟ್ ಪ್ರೂಫ್ ಕಾರನ್ನು ಖರೀದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವರದಿಯ ಪ್ರಕಾರ, ಸಲ್ಮಾನ್ ಖಾನ್ ಬುಲೆಟ್ ಪ್ರೂಫ್ ನಿಸ್ಸಾನ್ ಪೆಟ್ರೋಲ್ ಎಸ್‌ಯುವಿಯನ್ನು ಖರೀದಿಸಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಕಾರು ಲಭ್ಯವಿಲ್ಲದ ಕಾರಣ, ಸಲ್ಮಾನ್ ಖಾನ್ ಇದೀಗ ದುಬೈನಿಂದ ಆಮದು ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಕಾರಿನ ಬೆಲೆ ಸುಮಾರು 2 ಕೋಟಿಯಷ್ಟಿದ್ದು, ಆದಷ್ಟು ವೇಗವಾಗಿ ಕಾರನ್ನು ಭಾರತಕ್ಕೆ ತರಿಸಿಕೊಳ್ಳಲು ಸಲ್ಮಾನ್ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).