ನ್ಯೂಸ್

26/11 ದಾಳಿ ಸಂಚುಕೋರ ಸಾಜಿದ್​ ಮೀರ್​ಗೆ ಜೈಲಲ್ಲೇ ವಿಷಪ್ರಾಶನ; ಸ್ಥಿತಿ ಗಂಭೀರ

ನವದೆಹಲಿ: 26/11 ದಾಳಿ ಹಿಂದಿನ ಮಾಸ್ಟರ್​ಮೈಂಡ್​ ಭಾರತಕ್ಕೆ ಬೇಕಾಗಿರುವ ಮೋಸ್ಟ್​ ವಾಂಟೆಡ್​ ಭಯೋತ್ಪಾದಕರಲ್ಲಿ ಒಬ್ಬನಾದ  ಸಾಜಿದ್ ಮೀರ್‌ಗೆ ಜೈಲಿನಲ್ಲೇ ವಿಷವುಣಿಸಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

ಪಾಕಿಸ್ತಾನದಲ್ಲಿ ಮೋಸ್ಟ್‌ ವಾಂಟೆಡ್‌ ಉಗ್ರರಿಗೆ ಭದ್ರತೆ ಇಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಅದಕ್ಕೆ ಕಾರಣ ಇತ್ತೀಚಿನ ದಿನಗಳಲ್ಲಿ ಭಾರತಕ್ಕೆ ಬೇಕಾಗಿರುವ ಮೋಸ್ಟ್‌ ವಾಂಟೆಡ್ ಕ್ರಿಮಿನಲ್‌ಗಳು ಅಪರಿಚಿತರ ಗುಂಡೇಟಿಗೆ ಬಲಿಯಾಗುತ್ತಿರುವುದು. ಇದಕ್ಕೆ ನಿದರ್ಶನ ಎಂಬಂತೆ ಇದೀಗ ಸಾಜಿದ್​ ಮೀರ್​ನನ್ನು ಹತ್ಯೆ ಮಾಡಲಾಗಿದೆ.

26/11 ಮುಂಬೈ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಪಾಕಿಸ್ತಾನಿ ಉಗ್ರ ಸಾಜಿದ್ ಮೀರ್‌ಗೆ ಪಾಕಿಸ್ತಾನದ ಡೇರಾ ಘಾಜಿ ಖಾನ್‌ ನಗರದ ಜೈಲಲ್ಲೇ ವಿಷವುಣಿಸಲಾಗಿದೆ. ಹೀಗಾಗಿ ಆತನ ಸ್ಥಿತಿ ಗಂಭೀರವಾಗಿದ್ದು, ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಆತ ಚೇತರಿಸಿಕೊಂಡಿಲ್ಲ, ವೆಂಟಿಲೇಟರ್‌ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ವಿಷಯುಕ್ತ ಆಹಾರ ಸೇವಿಸಿ ಗಂಭೀರವಾಗಿ ಅಸ್ವಸ್ಥಗೊಂಡಿರುವ ಸಾಜಿದ್‌ ಮಿರ್‌ನನ್ನು ಪಾಕಿಸ್ತಾನ ಸೇನೆ ಏರ್‌ಲಿಫ್ಟ್‌ ಮಾಡಿ ಬಹವಾಲ್‌ಪುರದ ಸಿಎಂಎಚ್‌ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ ಕಾಲೇಜಿಗೆ ದಾಖಲಿಸಲಾಗಿದೆ. ವಿಷ ಪ್ರಾಶನ ಪ್ರಕರಣ ವರದಿಯಾದ ಬೆನ್ನಲ್ಲೇ ಜೈಲಿನಲ್ಲಿದ್ದ ಅಡುಗೆ ಮಾಡುತ್ತಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಕೆಲವು ತಿಂಗಳ ಹಿಂದೆ ಸಾಜಿದ್ ಮಿರ್‌ನನ್ನು ಲಾಹೋರ್ ಜೈಲಿನಿಂದ ಡೇರಾ ಘಾಜಿ ಖಾನ್‌ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು.  

ಮೋಸ್ಟ್​ ವಾಂಟೆಡ್​

ಸಾಜಿದ್ ಮಿರ್ ಪಾಕಿಸ್ತಾನ ಮೂಲದ ಲಷ್ಕರ್-ಎ-ತೋಯ್ಬಾ (LET) ಹಿರಿಯ ಸದಸ್ಯನಾಗಿದ್ದು 2008ರ ನವೆಂಬರ್‌ನಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿದ್ದಾನೆ. ಮುಂಬೈ ಭಯೋತ್ಪಾದಕ ದಾಳಿಯಲ್ಲಿನ ಪಾತ್ರಕ್ಕಾಗಿ ಅಮೆರಿಕ ಆತನ ತಲೆಗೆ 5 ದಶಲಕ್ಷ ಡಾಲರ್‌ ಬಹುಮಾನ ಘೋಷಿಸಿದೆ. 2022ರ ಜೂನ್‌ನಲ್ಲಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಭಯೋತ್ಪಾದನೆ-ಹಣಕಾಸಿನ ಪ್ರಕರಣದಲ್ಲಿ ಮೀರ್‌ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.