ನ್ಯೂಸ್

ಸದ್ಗುರು ಮಣ್ಣು ರಕ್ಷಿಸಿ ಅಭಿಯಾನ: ಆಸ್ಟ್ರಿಯಾದ ವಿಯೆನ್ನಾದಲ್ಲೂ ಅದ್ಭುತ ಸ್ಪಂದನೆ

ಆಸ್ಟ್ರಿಯಾ: ಈಶ ಫೌಂಡೇಷನ್​ನ ಸದ್ಗುರು ಅವರು ಮಣ್ಣು ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ನೂರು ದಿನಗಳಲ್ಲಿ 27 ರಾಷ್ಟ್ರಗಳ 30 ಸಾವಿರ ಕಿ.ಮೀ. ದೂರವನ್ನು ಏಕಾಂಗಿಯಾಗಿ ಬೈಕ್​ನಲ್ಲಿ ಸಂಚರಿಸುವ ಅಭಿಯಾನ ಈಗಾಗಲೇ ಒಂದು ವಾರವನ್ನು ಪೂರೈಸಿದೆ.

ಲಂಡನ್​ನಲ್ಲಿ ಆರಂಭವಾದ ಈ ಅಭಿಯಾನ ಯುಕೆ, ನೆದರ್ಲೆಂಡ್ಸ್​, ಜರ್ಮನಿ, ಜೆಕ್ ಗಣರಾಜ್ಯಗಳನ್ನು ಹಾದು ಆಸ್ಟ್ರಿಯಾದ ವಿಯೆನ್ನಾಗೆ ತಲುಪಿದ್ದು, ಅಲ್ಲಿಯೂ ಅದ್ಭುತ ಸ್ಪಂದನೆ ಸಿಕ್ಕಿದೆ.

ಸದ್ಗುರು ಅವರು ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಮ್ಯೂಸಿಯಮ್ಸ್​ ಕ್ವಾರ್ಟಿಯರ್​ಗೆ ಭೇಟಿ ನೀಡಿದ್ದು, ಅದರ ನಿರ್ದೇಶಕ ಬೆಟಿನಾ ಲೀಡ್ಲ್​ ಸದ್ಗುರುಗೆ ಆತ್ಮೀಯ ಸ್ವಾಗತ ಕೋರಿದರು. ನಂತರ ಸದ್ಗುರು ವಿಯೆನ್ನಾದಲ್ಲಿನ ರಾಯಭಾರ ಕಚೇರಿಗೆ ಭೇಟಿ ನೀಡಿದರು. ಅಲ್ಲಿ ಆಸ್ಟ್ರಿಯಾದಲ್ಲಿನ ಭಾರತದ ರಾಯಭಾರಿ ಜೈದೀಪ್ ಮಜುಮ್ದಾರ್​ ಸದ್ಗುರುವನ್ನು ಸ್ವಾಗತಿಸಿದರು.

ವಿಯೆನ್ನಾದಲ್ಲಿನ ಯುನೈಟೆಡ್​ ನೇಷನ್ಸ್​ನ ಕಚೇರಿಯಲ್ಲಿ ಮಾತನಾಡಿದ ಸದ್ಗುರು, ಮಣ್ಣು ರಕ್ಷಣೆ ಕುರಿತ ವಿಚಾರವಾಗಿ ನಾನು ದಿನದ 24 ಗಂಟೆ ಕೂಡ ಲಭ್ಯವಿರುತ್ತೇನೆ. ಬೈಕ್​ನಲ್ಲಿರುವಾಗಲೂ ವಿಡಿಯೋ ಕಾಲ್​ ಮೂಲಕ ಸಿಗಬಲ್ಲೆ ಎಂದು ಹೇಳಿದರು.

ಇನ್ನು ಮಣ್ಣು ರಕ್ಷಣೆ ಕುರಿತು ಸದ್ಗುರು ಅವರು ನಟ ಗೊರಾನ್ ವಿಸ್ನ್‌ಜಿಕ್ ಜತೆ ಸಂವಾದ ನಡೆಸಲಿದ್ದು, ಅದು ಭಾರತೀಯ ಕಾಲಮಾನದಲ್ಲಿ ರಾತ್ರಿ 10.30ಕ್ಕೆ ನೇರಪ್ರಸಾರ (savesoil.org/live) ಆಗಲಿದೆ.