ನ್ಯೂಸ್

13 ಸಾವಿರ ರೂ.ಗೆ ನಿಂಬೆ ಹಣ್ಣು ಖರೀದಿ! ದೇವರ ಮುಂದಿದ್ದ ವಸ್ತುಗಳಿಗೆ ಭಾರೀ ಡಿಮ್ಯಾಂಡ್​ | Sacred Lemon

Sacred Lemon: ಅಡುಗೆ ಮತ್ತು ಪೂಜೆ ಕಾರ್ಯಗಳಲ್ಲಿ ಅತಿ ಹೆಚ್ಚಾಗಿ ಬಳಕೆಯಾಗುವ ನಿಂಬೆ ಹಣ್ಣು ಈ ಜಿಲ್ಲೆಯ ಹಳ್ಳಿಯೊಂದರ ದೇವಸ್ಥಾನದಲ್ಲಿ ಭಾರೀ ಬೇಡಿಕೆ ಗಿಟ್ಟಿಸಿಕೊಂಡಿದೆ. ಇಲ್ಲಿನ ಆಡಳಿತ ಮಂಡಳಿ, ವಿಶೇಷ ಆಚರಣೆಗಳಲ್ಲಿ ದೇವರ ಮುಂದಿಡುವ ನಿಂಬೆ ಹಣ್ಣು ಮತ್ತು ಇತರೆ ವಸ್ತುಗಳನ್ನು ಹರಾಜಿಗಿಡುತ್ತದೆ. ಈ ಸಂದರ್ಭದಲ್ಲಿ ಭಕ್ತಾಧಿಗಳು ತಮಗೆ ಬೇಕಾದ ವಸ್ತುವಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿ ಖರೀದಿಸಬಹುದು. ಅದೇ ರೀತಿ ಇಲ್ಲೊಂದು ನಿಂಬೆ ಹಣ್ಣು ಬರೋಬ್ಬರಿ 13,000 ರೂ.ಗೆ ಖರೀದಿಯಾಗಿದೆ.

ಈ ವರ್ಷದ ಎರಡನೇ ಹಬ್ಬವಾದ ಮಹಾಶಿವರಾತ್ರಿ ಭಾಗವಾಗಿ, ತಮಿಳುನಾಡಿನ ವಿಲಕ್ಕೇತಿ ಗ್ರಾಮದಲ್ಲಿರುವ ಪಳಮ್‌ತಿನ್ನಿ ಕರುಪ್ಪ ಈಶ್ವರನ್ ದೇವಸ್ಥಾನದ ಆಡಳಿತ ಮಂಡಳಿಯು, ಬುಧವಾರ (ಫೆ.26) ಮಧ್ಯರಾತ್ರಿ ಭಕ್ತಾಧಿಗಳ ಸಮ್ಮುಖದಲ್ಲಿ ಹರಾಜು ಏರ್ಪಡಿಸಿತ್ತು. ಇದು ಹಲವಾರು ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ಸಂಪ್ರದಾಯ ಎನ್ನಲಾಗಿದೆ. ಈ ಹರಾಜಿನಲ್ಲಿ ದೇವರ ಮುಂದಿಟ್ಟಿದ್ದ ಒಂದು ನಿಂಬೆ ಹಣ್ಣು 13 ಸಾವಿರ ರೂ.ಗೆ ಖರೀದಿಯಾಗಿದೆ.

ಭಕ್ತರು ದೇವರ ವಿಗ್ರಹದ ಮುಂದಿಟ್ಟಿದ್ದ ಪವಿತ್ರ ವಸ್ತುಗಳಾದ ನಿಂಬೆ, ಬೆಳ್ಳಿ ಉಂಗುರ ಮತ್ತು ಬೆಳ್ಳಿ ನಾಣ್ಯ ಸೇರಿದಂತೆ ಇತರೆ ವಸ್ತುಗಳಿಗೆ ಬಿಡ್ಡಿಂಗ್ ನಡೆಸಿದ್ದಾರೆ. ಸ್ಥಳೀಯ ನಿವಾಸಿ ತಂಗರಾಜ್ ನಿಂಬೆಹಣ್ಣನ್ನು 13,000 ರೂ.ಗೆ ಪಡೆದುಕೊಂಡರೆ, ಅರಚಲೂರಿನ ಚಿದಂಬರಂ ಬೆಳ್ಳಿ ಉಂಗುರವನ್ನು 43,100 ರೂ.ಗೆ ಖರೀದಿಸಿದ್ದಾರೆ.

ಇನ್ನೂ ರವಿಕುಮಾರ್ ಮತ್ತು ಬಾನುಪ್ರಿಯಾ ಜಂಟಿಯಾಗಿ ಬೆಳ್ಳಿ ನಾಣ್ಯಕ್ಕಾಗಿ 35,000 ರೂ.ಗೆ ಬಿಡ್ ಮಾಡಿದ್ದಾರೆ. ದೇವರ ಅನುಗ್ರಹವಿರುವ ಈ ವಸ್ತುಗಳನ್ನು ಪಡೆಯುವುದರಿಂದ ಕುಟುಂಬದಲ್ಲಿ ಸಮೃದ್ಧಿ ಮತ್ತು ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ,(ಏಜೆನ್ಸೀಸ್).