ನವದೆಹಲಿ: ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಪೊಲೀಸ್ ತನಿಖೆ ಇನ್ನೂ ಹಾಜರಾಗಿಲ್ಲ. ಅದರಿಂದ ತಪ್ಪಿಸಿಕೊಳ್ಳಲು ಹೊಸ ಹೊಸ ನೆಪಗಳನ್ನು ಹುಡುಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕರೊನಾ ಸೋಂಕಿಗೆ ಒಳಗಾಗಿರಬಹುದೆಂಬ ಹಿನ್ನೆಲೆಯಲ್ಲಿ ಪೊಲೀಸರು ಮೌಲಾನಾ ಸಾದ್ನನ್ನು ಪರೀಕ್ಷೆಗೆ ಒಳಪಡುವಂತೆ ಸೂಚಿಸಿದ್ದರು. ಆದರೆ, ಸರ್ಕಾರಿ ಪ್ರಯೋಗಾಲಯದಿಂದ ಕೋವಿಡ್ -19 ಪರೀಕ್ಷೆಯ ವರದಿಯನ್ನು ದೆಹಲಿ ಪೊಲೀಸರು ಕೇಳಿದರೂ ಆತ ಇನ್ನೂ ಸಲ್ಲಿಸಿಲ್ಲ. ಪರೀಕ್ಷೆಗೆ ಒಳಗಾಗಿ, ತನಿಖೆಗೆ ಒಳಪಡಲು ಆತನಿಗೆ ಹೊಸ ಸೂಚನೆ ನೀಡುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಜಮಾತ್‌ನ ಇತರ ಆರು ಪದಾಧಿಕಾರಿಗಳನ್ನು ಪ್ರಶ್ನಿಸಲಾಗಿದೆ ಎಂದು ಅಪರಾಧ ಶಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾದ್ ಇನ್ನೂ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕಿದೆ. “ನಾವು ಸರ್ಕಾರಿ ಆಸ್ಪತ್ರೆಯಿಂದ ಮೌಲಾನಾ ಸಾದ್ ಅವರ ಕೋವಿಡ್ -19 ಪರೀಕ್ಷಾ ವರದಿಯನ್ನು ಸ್ವೀಕರಿಸಿಲ್ಲ. ಈ ನಿಟ್ಟಿನಲ್ಲಿ ಕೆಲವು ವಾರಗಳ ಹಿಂದೆ ಅವರಿಗೆ ನೋಟಿಸ್ ನೀಡಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ”ಎಂದು ಅಧಿಕಾರಿ ಹೇಳಿದರು.
ಸಾದ್ ಈ ಹಿಂದೆ ಖಾಸಗಿ ಪ್ರಯೋಗಾಲಯದಲ್ಲಿ ಕೋವಿಡ್ -19 ಪರೀಕ್ಷೆಯ ವರದಿಯನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಅಪರಾಧ ಶಾಖೆ ತಂಡಕ್ಕೆ ವರದಿಯನ್ನು ಸಲ್ಲಿಸಿದ್ದರು. ಆ ವರದಿಯಲ್ಲಿ ಸೋಂಕು ಇಲ್ಲದಿರುವುದು ಪತ್ತೆಯಾಗಿತ್ತು. ಆದರೆ ಸರ್ಕಾರಿ ಪ್ರಯೋಗಾಲಯದ ಪರೀಕ್ಷಾ ವರದಿ ಸಲ್ಲಿಸಲು ತಂಡವು ಒತ್ತಾಯಿಸಿತ್ತು.
ನಿರ್ದೇಶಾನುಸಾರ ತನಿಖೆಗೆ ಸಹಕರಿಸಿರುವುದಾಗಿ ಜಮಾತ್ ವಕ್ತಾರ ಶಾಹಿದ್ ಅಲಿ ಹೇಳಿದ್ದಾರೆ. ಮೌಲಾನಾ ಸಾದ್ರನ್ನು ಕೋವಿಡ್ -19 ಗಾಗಿ ಪರೀಕ್ಷೆಗೆ ಒಳಪಡಿಸಿದಾಗ ಫಲಿತಾಂಶ ನೆಗೆಟಿವ್ ಕಂಡುಬಂದಿದೆ. ಅದನ್ನು ತನಿಖಾ ಸಂಸ್ಥೆಗೆ ತಿಳಿಸಲಾಗಿತ್ತು. ನ್ಯಾಯಾಲಯ ನಿರ್ದೇಶಿಸಿದಾಗ ತನಿಖಾ ಅಧಿಕಾರಿ ಮುಂದೆ ಹಾಜರಾಗಲು ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.
ಆರು ಪದಾಧಿಕಾರಿಗಳನ್ನು ಪ್ರಶ್ನಿಸುವ ಎರಡನೇ ಸುತ್ತಿನ ಪ್ರಕ್ರಿಯೆಯನ್ನು ಸಹ ಯೋಜಿಸಲಾಗಿದೆ. ತನಿಖಾಧಿಕಾರಿಗಳ ಮುಂದೆ ಅವರ ಉಪಸ್ಥಿತಿಯನ್ನು ಕೋರಿ ನೋಟಿಸ್‌ಗಳನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ದೆಹಲಿಯ ನಿಜಾಮುದ್ದೀನ್‌ನ ಜಮಾತ್‌ನ ಪ್ರಧಾನ ಕಚೇರಿಯಲ್ಲಿ 34 ದೇಶಗಳ 900 ಕ್ಕೂ ಹೆಚ್ಚು ವಿದೇಶಿಯರು ಸೇರಿ ಸಾವಿರಾರು ಜನರು ಜಮಾತ್ಗೆ ಹಾಜರಾಗಿದ್ದರು. ಮಾರ್ಚ್ ಅಂತ್ಯದಲ್ಲಿ ವಿದೇಶಿಯರು ಸೇರಿದಂತೆ 2,300 ಕ್ಕೂ ಹೆಚ್ಚು ಜನರನ್ನು ಪ್ರಧಾನ ಕಚೇರಿಯಿಂದ ಸ್ಥಳಾಂತರಿಸಿ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ದೆಹಲಿ ಮತ್ತು ತಮಿಳುನಾಡು ಎರಡರಲ್ಲೂ ಆರಂಭಿಕ ಸೋಂಕು ಹರಡಲು ಈ ಸಭೆ ಮೂಲವಾಗಿತ್ತು.