ಡೆವೆಂಟರ್ (ನೆದರ್ಲೆಂಡ್): ಕೈಯಲ್ಲಿ ಶಸ್ತ್ರಾಸ್ತ್ರ ಇದ್ದರೂ ಕಳ್ಳರು ಬಂದಾಗ ಎಂಥವರೂ ನಡುಗಿ ಹೋಗುವುದು ಸಹಜ. ಆದರೆ ಇಲ್ಲೊಬ್ಬ ಮಹಿಳೆ ಅಂಗಡಿ ಕ್ಲೀನ್ ಮಾಡುವ ಬಟ್ಟೆಯಿಂದಲೇ ಪಿಸ್ತೂಲುಧಾರಿ ಕಳ್ಳನನ್ನು ಹಿಮ್ಮೆಟ್ಟಿಸಿದ್ದಾಳೆ! ಅದರ ವಿಡಿಯೋ ಭಾರಿ ವೈರಲ್ ಆಗಿದ್ದು, ಮಹಿಳೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ನೆದರ್ಲೆಂಡ್ನ ಡೆವೆಂಟರ್‌ನ ಮೆವ್ಲಾನಾ ಎಂಬ ಬೇಕರಿಯಲ್ಲಿ ಈ ಘಟನೆ ನಡೆದಿದೆ. ಬೇಕರಿ ಓಪನ್ ಮಾಡಿದ ಅಲ್ಲಿನ ನೌಕರಸ್ಥ ಮಹಿಳೆ ಮೊದಲಿಗೆ ಬಟ್ಟೆಯೊಂದರಿಂದ ಬೇಕರಿ ತಿನಿಸು ಇಟ್ಟಿರುವ ಗಾಜಿನ ಬಾಕ್ಸ್ಗಳನ್ನು ಕ್ಲೀನ್ ಮಾಡುತ್ತಿದ್ದಳು. ಆ ಸಂದರ್ಭದಲ್ಲಿ ಕಪ್ಪು ಬಣ್ಣದ ಮುಖವಾಡ ಧರಿಸಿ, ಕೈಯಲ್ಲಿ ಪಿಸ್ತೂಲ್ ಹಿಡಿದು ಏಕಾಏಕಿ ಖದೀಮ ಅಂಗಡಿಗೆ ನುಗ್ಗಿದ್ದಾನೆ.
ಏಕಾಏಕಿ ಮಹಿಳೆಯ ಪಕ್ಕಕ್ಕೆ ಬಂದು ಅಲ್ಲಿರುವ ಲಾಕರ್‌ನಲ್ಲಿ ಹಣ ಕದಿಯಲು ಯತ್ನಿಸಿದ್ದಾನೆ. ಅವನ ಕೈಯಲ್ಲಿ ಪಿಸ್ತೂಲ್ ಇದ್ದುದನ್ನು ಗಮನಿಸಿದರೂ ಹೆದರಿಕೊಳ್ಳದ ಮಹಿಳೆ ಕ್ಲೀನ್ ಮಾಡುತ್ತಿದ್ದ ಬಟ್ಟೆಯಿಂದಲೇ ಮೊದಲಿಗೆ ಆತನನ್ನು ಥಳಿಸಿದ್ದಾಳೆ. ನಂತರ ಕಳ್ಳನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾಳೆ. ಅವನ ಕೈಯಿಂದ ಪಿಸ್ತೂಲ್ ಕೆಳಕ್ಕೆ ಬಿದ್ದಿದೆ. ನಂತರ ಹೊರಗಡೆ ಇದ್ದ ವ್ಯಕ್ತಿಯೊಬ್ಬ ಗಲಾಟೆ ಕೇಳಿ ಒಳಗೆ ಬಂದಿದ್ದಾನೆ. ಆ ವೇಳೆ ಕಳ್ಳ ಪರಾರಿಯಾಗಿದ್ದಾನೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ಶುಚಿಗೊಳಿಸುವ ಬಟ್ಟೆಯ ಶಕ್ತಿ ಕಡಿಮೆ ಎಂದು ಅಂದಾಜು ಮಾಡಬೇಡಿ ಎಂದು ಕ್ಯಾಪ್ಷನ್‍ನೊಂದಿಗೆ ತನ್ಸು ಯೆಗೆನ್ ಎನ್ನುವವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಮಹಿಳೆಯ ಧೈರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. (ಏಜೆನ್ಸೀಸ್)
ಇಲ್ಲಿದೆ ನೋಡಿ ವಿಡಿಯೋ