ನ್ಯೂಸ್

ಟಿಎಂಸಿ ಕಾರ್ಯಕರ್ತನ ಮೇಲೆ ಗುಂಡಿನ ದಾಳಿ- ಸ್ಥಳದಲ್ಲಿಯೇ ಸಾವು

suchetana

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಕಾರ್ಯಕರ್ತನ ಮೇಲೆ ಗುಂಡಿನ ದಾಳಿ ನಡೆದಿದ್ದು, ಅವರು ಮೃತಪಟ್ಟಿದ್ದಾರೆ.

ಪಾಸ್ಚಿಮ್ ಬರ್ಧಮನ್ ಜಿಲ್ಲೆಯ ಅಂಡಾಲ್​ನಲ್ಲಿ ಈ ಘಟನೆ ನಡದಿದೆ. ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ಗಾಯಗೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ನಿನ್ನೆ ಬುಧವಾರ ರಾತ್ರಿ ಸುಮಾರು 11 ಗಂಟೆಯ ವೇಳೆ ಇಬ್ಬರು ಅಪರಿಚಿತರು ಧರ್ಮವೀರ್​ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಧರ್ಮವೀರ್​ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಧರ್ಮವೀರ್​ ಜತೆಗೆ ಇಬ್ಬರು ಇದ್ದು ಅವರಿಗೆ ತೀವ್ರವಾಗಿ ಗಾಯಗಳಾಗಿವೆ.

ಘಟನೆ ಹಿಂದೆ ರಾಜಕೀಯ ಕೈವಾಡವಿದೆ ಎಂಬುದನ್ನು ಸ್ಥಳೀಯ ಟಿಎಂಸಿ ನಾಯಕರು ನಿರಾಕರಿಸಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಇದು ಆಗಿರಬಹುದು ಎಂದಿದ್ದಾರೆ. ಅದೇ ಇನ್ನೊಂದೆಡೆ, ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿನ ಬಣಗಳ ನಡುವಣ ಭಿನ್ನಾಭಿಪ್ರಾಯದಿಂದಾಗಿ ಈ ಹತ್ಯೆ ನಡೆದಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.