ನ್ಯೂಸ್

ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಿಗಲ್ಲ ನಿರೀಕ್ಷಣಾ ಜಾಮೀನು: ಮಸೂದೆ ಅಂಗೀಕರಿಸಿದ ಯುಪಿ

ಲಖನೌ: ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸರ್ಕಾರ ಮಹತ್ವದ ನಿರ್ಣಯವೊಂದನ್ನು ತೆಗೆದುಕೊಂಡಿದ್ದು, ಇದಕ್ಕೆ ಅಂಗೀಕಾರವೂ ದೊರೆತಿದೆ. ಅತ್ಯಾಚಾರ ಸೇರಿದಂತೆ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಗಂಭೀರ ಅರೋಪ ಹೊತ್ತವರಿಗೆ ಯಾವುದೇ ಕಾರಣಕ್ಕೂ ನಿರೀಕ್ಷಣಾ ಜಾಮೀನು ಸಿಗುವುದಿಲ್ಲ ಎಂಬ ಮಹತ್ವದ ನಿರ್ಣಯ ಇದಾಗಿದೆ.

ಅಪರಾಧ ದಂಡಪ್ರಕ್ರಿಯಾ ಸಂಹಿತೆ (ಕ್ರಿಮಿನಲ್​ ಪ್ರೊಸೀಜರ್ ಕೋಡ್- ಉತ್ತರ ಪ್ರದೇಶ ತಿದ್ದುಪಡಿ) ಮಸೂದೆ 2022ಕ್ಕೆ ಅಂಗೀಕಾರ ದೊರೆತಿದೆ. ಇದು ಉಭಯ ಸದನಗಳಲ್ಲಿ ಅಂಗೀಕಾರ ಪಡೆದುಕೊಂಡು, ರಾಷ್ಟ್ರಪತಿಗಳ ಅಂಕಿತ ಬಿದ್ದರೆ ಕಾನೂನಾಗಿ ಜಾರಿಗೊಳ್ಳಲಿದೆ.

ಉತ್ತರ ಪ್ರದೇಶ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ ಶುಕ್ರವಾರ ಸದನದಲ್ಲಿ ಈ ತಿದ್ದುಪಡಿ ಮಸೂದೆಯ ಕುರಿತು ಮಾತನಾಡಿದ್ದು, ಪೋಕ್ಸೊ ಕಾಯ್ದೆ (POCSO Act) ಮತ್ತು ಮಹಿಳೆಯರೊಂದಿಗೆ ದುಷ್ಕೃತ್ಯ ಎಸಗುವ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡದಂತೆ ನಿಬಂಧನೆಯನ್ನು ಹೇರಲಾಗಿದೆ ಎಂದು ಹೇಳಿದ್ದಾರೆ.

ಇದರ ಅರ್ಥ ಒಂದು ವೇಳೆ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ಕುರಿತು ಯಾವುದೇ ವ್ಯಕ್ತಿಯ ವಿರುದ್ಧ ಕೇಸ್​ ದಾಖಲಾದ ತಕ್ಷಣ, ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಆರೋಪಿಗಳು ಬಂಧನಕ್ಕೆ ಮುನ್ನವೇ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಸುತ್ತಾರೆ. ಅಂಥ ಸಂದರ್ಭಗಳಲ್ಲಿ ಕೆಲವು ಪ್ರಕರಣಗಳಲ್ಲಿ ಅವರನ್ನು ಬಂಧಿಸದಂತೆ ಕೋರ್ಟ್​ ಜಾಮೀನು ಮಂಜೂರು ಮಾಡುತ್ತದೆ. ಆದರೆ ಈ ಕಾನೂನು ಜಾರಿಗೊಂಡರೆ ಆ ಅವಕಾಶ ಇನ್ನು ಸಿಗುವುದಿಲ್ಲ.

ಮತ್ತೊಂದು ಮಸೂದೆ:
ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿ ವಸೂಲಾತಿ (ತಿದ್ದುಪಡಿ) ಮಸೂದೆ- 2022 ಕೂಡ ಅಂಗೀಕಾರಗೊಂಡಿದೆ. ಇದು ಕಾನೂನಾಗಿ ಜಾರಿಗೆ ಬಂದರೆ, ಯಾವುದೇ ಗಲಭೆಯಲ್ಲಿ ಸತ್ತವರಿಗೆ 5 ಲಕ್ಷ ರೂ. ಪರಿಹಾರ ನೀಡಲು ನ್ಯಾಯಮಂಡಳಿಗೆ ಅಧಿಕಾರ ಇರುತ್ತದೆ, ಪರಿಹಾರದ ಹಣವನ್ನು ತಪ್ಪಿತಸ್ಥ ವ್ಯಕ್ತಿಯಿಂದ ವಸೂಲಿ ಮಾಡಲಾಗುವುದು.

ಈ ಮಸೂದೆಯ ಅಡಿಯಲ್ಲಿ ಸಂತ್ರಸ್ತರು ಅಥವಾ ಗಲಭೆಯಲ್ಲಿ ಜೀವ ಕಳೆದುಕೊಂಡ ವ್ಯಕ್ತಿಯ ಅವಲಂಬಿತರು ಪರಿಹಾರಕ್ಕಾಗಿ ಮನವಿ ಮಾಡಬಹುದು. ಅಂತಹ ಪ್ರಕರಣಗಳಲ್ಲಿ ಪೊಲೀಸ್ ಕ್ರಮದ ವೆಚ್ಚವನ್ನು ತಪ್ಪಿತಸ್ಥರೇ ಭರಿಸಬೇಕೆಂದು ತಿದ್ದುಪಡಿ ಮಸೂದೆಯಲ್ಲಿ ತಿಳಿಸಲಾಗಿದೆ. (ಏಜೆನ್ಸೀಸ್​)