ನ್ಯೂಸ್

ನಮ್ಮ ಅಪ್ಪ-ಅಮ್ಮನಿಂದ ರಕ್ಷಣೆ ನೀಡಿ: ಪೊಲೀಸರ ಬಳಿ ಮುಸ್ಲಿಂ ಯುವತಿಯರ ಅಳಲು

ಬರೇಲ್ವಿ: ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದ ಮೇಲೆ ಹಿಂದೂ ಯುವತಿಯರು ಮತಾಂತರಗೊಂಡಿರುವ ಪ್ರಕರಣಗಳು ಹೆಚ್ಚೆಚ್ಚು ಸದ್ದು ಮಾಡುತ್ತಿವೆ. ಹೆಣ್ಣು ಮಕ್ಕಳು 18 ವರ್ಷಕ್ಕಿಂತ ಮೇಲ್ಪಟ್ಟು, ಸ್ವ ಇಚ್ಛೆಯಿಂದ ಮದುವೆಯಾಗಿ, ಮತಾಂತರಗೊಂಡಿದ್ದರೆ ಅದರ ಮಧ್ಯೆ ಅವರ ಪಾಲಕರು ಪ್ರವೇಶ ಮಾಡುವಂತಿಲ್ಲ. ಅವರಿಗೆ ಎಲ್ಲಾ ರೀತಿಯ ಹಕ್ಕು ಇದೆ ಎಂದು ಅನೇಕ ಹೈಕೋರ್ಟ್‌ಗಳು ಹೇಳಿವೆ.

ಇದೇ ಕಾರಣಕ್ಕೆ ಕೇವಲ ಹೆಣ್ಣುಮಕ್ಕಳ ಹೇಳಿಕೆಗಳನ್ನು ಆಧರಿಸಿ, ಆ ಪ್ರಕರಣಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೋ ಬೇಡವೋ ಗಮನಿಸುತ್ತಿದ್ದಾರೆ.

ಆದರೆ ಈ ನಡುವೆಯೇ, ಇಬ್ಬರು ಹಿಂದೂ ಯುವಕರು, ಮುಸ್ಲಿಂ ಯುವತಿಯರನ್ನು ಮದುವೆಯಾಗಿರುವ ಘಟನೆಗಳು ಇದೀಗ ಭಾರಿ ಸುದ್ದಿ ಮಾಡುತ್ತಿವೆ.

ಆದರೆ ಇಬ್ಬರೂ ಯುವತಿಯರ ಮನೆಯವರು ಹಿಂದೂ ಯುವಕರ ಬಗ್ಗೆ ಅಪಹರಣ, ದರೋಡೆ ಪ್ರಕರಣಗಳ ಕೇಸು ದಾಖಲು ಮಾಡಿದ್ದಾರೆ. ಬರೇಲ್ವಿಯ ಹಫೀಝ್ ಗಂಜ್‌ನಲ್ಲಿ ಒಂದು ಪ್ರಕರಣ ನಡೆದಿದ್ದು, ಬಹೇದಿ ಪ್ರದೇಶದಲ್ಲಿ ಇನ್ನೊಂದು ಘಟನೆ ನಡೆದಿದೆ.

ಈ ಎರಡೂ ಪ್ರಕರಣಗಳಲ್ಲಿ ತಮ್ಮ ಮಕ್ಕಳು ಹಿಂದೂ ಯುವಕರ ಪ್ರೇಮ ಪಾಶಕ್ಕೆ ಬಿದ್ದು ಹೋಗಿದ್ದಾರೆ. ಅವರನ್ನು ವಾಪಸ್‌ ಕರೆತರಬೇಕು ಎಂದು ಯುವತಿಯರ ಪಾಲಕರು ಪೊಲೀಸರಲ್ಲಿ ದೂರು ದಾಖಲಿಸಿದ್ದರು.

ಈ ಕುರಿತು ಬರೇಲ್ವಿಯ ಮುಖ್ಯ ಪೊಲೀಸ್ ಅಧೀಕ್ಷಕ ರೋಹಿತ್ ಸಿಂಗ್ ಸಜ್ವಾನ್ ಎರಡೂ ಪ್ರಕರಣಗಳು ಬೇರೆ ಬೇರೆ ಕಡೆ ನಡೆದಿವೆ. ತನ್ನ ಪಾಲಕರ ವಿರುದ್ಧವೇ ಹೋಗಿರುವ ಯುವತಿಯರು ಅವರ ಮಾತನ್ನು ಕೇಳಬೇಡಿ. ನಾವು ಸ್ವ ಇಚ್ಛೆಯಿಂದ ಈ ಯುವಕರನ್ನು ವಿವಾಹವಾಗಿದ್ದು, ಖುಷಿಯಾಗಿದ್ದೇವೆ ಎಂದಿದ್ದಾರೆ ಎಂದು ಮಾಹಿತಿ ನೀಡಿದರು. ಅಷ್ಟೇ ಅಲ್ಲದೇ ಪಾಲಕರಿಂದಲೇ ತಮಗೆ ಬೆದರಿಕೆ ಇದ್ದು, ರಕ್ಷಣೆ ನೀಡಿ ಎಂದು ಪೊಲೀಸರನ್ನು ಕೋರಿದ್ದಾರೆ. ತಮಗೆ ಹಾಗೂ ಪತಿಗೆ ಜೀವಭಯವಿದ್ದು ಪಾಲಕರಿಂದ ರಕ್ಷಣೆ ಕೋರಿರುವುದಾಗಿ ಹೇಳಿದರು.

ಆದರೆ ಬರೇಲ್ವಿಯ ಹಫೀಝ್ ಗಂಜ್‌ ಕೇಸ್‌ನಲ್ಲಿ ಎರಡೂ ಕಡೆಯವರನ್ನು ಪೊಲೀಸರು ಕರೆಸಿ ಮಾತನಾಡಿದ್ದಾರೆ. ಯುವತಿಯ ಹೇಳಿಕೆ ಹಾಗೂ ಯುವಕನ ನಡವಳಿಕೆ ನೋಡಿರುವ ಯುವತಿಯ ಪಾಲಕರು, ಮಗಳೇ ಸ್ವ ಇಚ್ಛೆಯಿಂದ ಹೋಗಿರುವುದಾಗಿ ಅರಿತು, ನಂತರ ಮಗಳ ಮದುವೆಯನ್ನು ಮಾಡಿಸಿದ್ದಾರೆ ಎಂದಿರುವ ಪೊಲೀಸರು, ಬಹೇದಿ ಪ್ರದೇಶದಲ್ಲಿ ನಡೆದಿರುವ ಪ್ರಕರಣ ಬಗ್ಗೆ ಇನ್ನೂ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ' ನಾವು ಹೈಕೋರ್ಟ್ ನ ಆದೇಶವನ್ನು ಪಾಲಿಸುತ್ತಿದ್ದೇವೆ. ವಯಸ್ಕ ಜೋಡಿಯು ಪರಸ್ಪರ ಒಪ್ಪಿಗೆಯ ಮೂಲಕ ಮದುವೆಯಾದರೆ ಅವರ ನಡುವೆ ಕುಟುಂಬಗಳು ಹಸ್ತಕ್ಷೇಪ ಮಾಡುವಂತಿಲ್ಲ. ಅವರನ್ನು ಜೊತೆಯಾಗಿ ಬದುಕಲು ಅನುಮತಿಸಬೇಕು' ಎಂದು ಹೇಳಿಕೆ ನೀಡಿದ್ದಾರೆ.