ಮುಂಬೈ: ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್ಪಿ) ತಿರುಚುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿಯು ಎಲ್ಲಾ ಚಾನೆಲ್ಗಳ ರೇಟಿಂಗ್ಸ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.
ಟಿವಿ ವಾಹಿನಿಗಳ ರೇಟಿಂಗ್ಸ್‌ನಲ್ಲಿ ಹಗರಣ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸುದ್ದಿ ವಾಹಿನಿಗಳ ರೇಟಿಂಗ್ಸ್‌ನ್ನು ಮೂರು ತಿಂಗಳ ಕಾಲ ಸ್ಥಗಿತಗೊಳಿಸುವುದಾಗಿ ಮಂಡಳಿ ಹೇಳಿದೆ.
ಸುದ್ದಿವಾಹಿನಿಗಳ ರೇಟಿಂಗ್ಗಳ ಸಂಖ್ಯಾಶಾಸ್ತ್ರೀಯ ದೃಢತೆ, ಪಾರದರ್ಶಕತೆಯನ್ನು ಸುಧಾರಿಸಲು ಪ್ರಸ್ತುತ ಅಳತೆಯ ಮಾನದಂಡಗಳನ್ನು ಪರಿಶೀಲಿಸಲು ಇನ್ನು 12 ವಾರಗಳವರೆಗೆ ಸಾಪ್ತಾಹಿಕ ರೇಟಿಂಗ್ಗೆ ವಿರಾಮ ನೀಡುವುದಾಗಿ ಅದು ತಿಳಿಸಿದೆ.
ಚಾಲ್ತಿಯಲ್ಲಿರುವ ಡಾಟಾ ಸಂಗ್ರಹ ವ್ಯವಸ್ಥೆಯನ್ನು ಪರಿಶೀಲಿಸಿ, ಅವುಗಳಲ್ಲಿ ಸುಧಾರಣೆ ಕೈಗೊಂಡು, ಡಾಟಾ ಸಂಗ್ರಹಗೊಳಿಸುವ ಮನೆಗಳಲ್ಲಿ ನಡೆಯುವ ಸಂಭಾವ್ಯ ಹಸ್ತಕ್ಷೇಪವನ್ನು ತಡೆಯುವುದಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಂತರ ಪರಿಸ್ಥಿತಿ ಅವಲೋಕಿಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಂಡಳಿ ತಿಳಿಸಿದೆ.
ಇದನ್ನೂ ಓದಿ: ರಿಪಬ್ಲಿಕ್ ಟಿವಿ ಅರ್ನಬ್ಗೆ ಇನ್ನೊಂದು ಸಂಕಷ್ಟ- ಸುಶಾಂತ್ ಸಿಂಗ್ ಸ್ನೇಹಿತನಿಂದ ₹200 ಕೋಟಿ ಮಾನನಷ್ಟ ನೋಟಿಸ್!
ಮಂಡಳಿಯ ತಾಂತ್ರಿಕ ತಂಡದ ಮೇಲುಸ್ತುವಾರಿಯಲ್ಲಿ ನಡೆಯಲಿರುವ ಈ ಪ್ರಕ್ರಿಯೆಗೆ 8-12 ವಾರಗಳು ಬೇಕಾಗಬಹುದು ಎಂದು ಸಂಸ್ಥೆ ಅಂದಾಜಿಸಿದೆ. ಆದರೆ ರಾಜ್ಯ ಮತ್ತು ಭಾಷಾವಾರು ಸುದ್ದಿ ವಾಚಕರ ವಿವರಗಳನ್ನು ಪ್ರತಿವಾರ ಬಿಡುಗಡೆ ಮಾಡುವುದಾಗಿ ಅದು ತಿಳಿಸಿದೆ.
ರೇಟಿಂಗ್ಸ್‌ಗಳನ್ನು ತಿರುಚಿ ಜಾಹೀರಾತು ಆದಾಯ ಸಂಗ್ರಹಿಸಿದ ಆರೋಪ ಸಂಬಂಧ ರಿಪಬ್ಲಿಕ್ ಟಿವಿ ಹಾಗೂ ಮಹಾರಾಷ್ಟ್ರ ಫಕ್ತ್ ಮರಾಠಿ ಮತ್ತು ಬಾಕ್ಸ್ ಸಿನಿಮಾಗಳ ವಿರುದ್ಧ ತನಿಖೆ ನಡೆಯುತ್ತಿದೆ. ಮಹಾರಾಷ್ಟ್ರ ವಾಹಿನಿಗಳ ಮಾಲಿಕರನ್ನು ಬಂಧಿಸಲಾಗಿದ್ದು, ರಿಪಬ್ಲಿಕ್ ಟಿವಿಯ ಉನ್ನತ ಅಧಿಕಾರಿಗಳನ್ನು ಮುಂಬಯಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದಂತೆ ಐವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ತಮ್ಮ ಕಡೆಯಿಂದ ಯಾವುದೇ ಅಕ್ರಮ ನಡೆದಿಲ್ಲ ಎಂದು ರಿಪಬ್ಲಿಕ್ ಟಿವಿ ತಿಳಿಸಿದೆ.
ಪ್ರೇಕ್ಷಕರ ಸಂಶೋಧನಾ ಮಂಡಳಿಯು ನೀಡುವ ಟಿಆರ್ಪಿಯ ಆಧಾರದ ಮೇಲೆ ಸುದ್ದಿವಾಹಿನಿಗಳಿಗೆ ಜಾಹೀರಾತುಗಳು ಬರುತ್ತವೆ. ಯಾವ ವಾಹಿನಿಗಳಿಗೆ ಹೆಚ್ಚು ಟಿಆರ್ಪಿ ಇದೆಯೋ, ಜಾಹೀರಾತು ಕಂಪೆನಿಗಳು ಆ ಚಾನೆಲಗಳಿಗೆ ಜಾಹೀರಾತು ಹೆಚ್ಚು ನೀಡುತ್ತವೆ. ಆದ್ದರಿಂದ ಟಿಆರ್ಪಿ ಎನ್ನುವುದು ಚಾನೆಲ್ಗಳ ಜೀವಾಳ ಆಗಿದೆ, ಇದೇ ಆದಾಯದ ಮುಖ್ಯಮೂಲವಾಗಿದೆ.