ನ್ಯೂಸ್

ಮನ ಮೆಚ್ಚಿದ ಹುಡುಗಿಗೆ ಇಂಪ್ರೆಸ್‌ ಮಾಡಲು ರೋಸ್‌ ಬದಲು ಗನ್‌ ಕೊಟ್ಟು ಜೈಲಿಗೆ ಹೋದ ಪ್ರೇಮಿ!

ನಾಗಲ್ಯಾಂಡ್ : ಯುವಕರು ತಾವು ಮೆಚ್ಚಿದ ಹುಡುಗಿಗೆ ವಿಶೇಷವಾಗಿ ಉಡುಗೊರೆ ನೀಡುವ ಮೂಲಕ ಇಂಪ್ರೆಸ್‌ ಮಾಡಲು ಮುಂದಾಗುವುದು ಸಹಜ. ಸಾಮಾನ್ಯವಾಗಿ ಮೊದಲಿಗೆ ಇಂಥ ಹುಡುಗರು ಕೊಡುವುದು ಗುಲಾಬಿ ಹೂವನ್ನು. ಆದರೆ ಇದು ಸಾಮಾನ್ಯ ಆಗಿಹೋಯಿತು, ಹೊಸತನನ್ನೇದರೂ ಕೊಡೋಣ ಎಂದುಕೊಂಡ ಯುವಕನೊಬ್ಬ ಗನ್‌ ಕೊಟ್ಟು ಈಗ ಜೈಲುಪಾಲಾಗಿದ್ದಾನೆ!

ನಾಗಲ್ಯಾಂಡ್‍ನ ಪದುಂಪುಖುರಿ ಪ್ರದೇಶದ ದಿಮಾಪುರ್ ನಿವಾಸಿ ಟಾರಿನ್ ತೀಖಿರ್ ಈಗ ಪೊಲೀಸರ ಅತಿಥಿ. ಈತ ತನ್ನ ಪ್ರೇಯಸಿಗೆ ಡಿಫರೆಂಟ್‌ ಆಗಿ ಪ್ರಪೋಸ್‌ ಮಾಡುವ ನಾನಾ ಯೋಚನೆ ಮಾಡಿದ್ದ. ನಂತರ ಆಕೆಗೆ ಗನ್‌ ಕೊಟ್ಟರೆ ಹೇಗೆ ಎಂಬ ಯೋಚನೆ ಬಂತು. ಆಕೆಯನ್ನು ಪ್ರಪೋಸ್‌ ಮಾಡಲು ಹೋಟೆಲ್‌ ಒಂದಕ್ಕೆ ಕರೆದುಕೊಂಡು ಹೋದ.

ಆದರೆ ಅಲ್ಲಿ ಚೆಕ್‌ ಮಾಡಿದಾಗ ಆತನ ಬಳಿ ಜೀವಂತ ಗುಂಡುಗಳು ಇರುವ ಗನ್‌ ಇರುವುದು ಕಂಡುಬಂದಿದೆ. ಕೂಡಲೇ ಹೋಟೆಲ್‌ನವರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನನ್ನು ಠಾಣೆಗೆ ಎಳೆದೊಯ್ದಿದ್ದಾರೆ. ಯುವಕ ತಾನು ಪ್ರೇಯಸಿಗಾಗಿ ಇದನ್ನು ತಂದಿರುವುದಾಗಿ ಪರಿಪರಿ ಬೇಡಿಕೊಂಡರೂ ಪೊಲೀಸರು ಅದನ್ನು ಕೇಳಲಿಲ್ಲ. ನನ್ನ ಬಳಿ ಗನ್‌ ಇರುವುದು ತಿಳಿದರೆ ಯುವತಿ ತುಂಬಾ ಸಂತೋಷಪಡುತ್ತಾಳೆ ಎನ್ನುವುದು ಇವನ ಅನಿಸಿಕೆ. ಆದರೆ ಈ ರೀತಿ ಗನ್‌ ಹಿಡಿದುಕೊಂಡು ತಿರುಗಾಡುವುದು ಕಾನೂನುಬಾಹಿರವಾಗಿದ್ದು ಮಾತ್ರವಲ್ಲದೇ ಆತ ಯಾರದ್ದೋ ಬಳಿ ಕೇಳಿ ಅದನ್ನು ಪಡೆದುಕೊಂಡು ಬಂದಿದ್ದ. ಅವನ ಬಳಿ ಲೈಸೆನ್ಸ್‌ ಇರಲಿಲ್ಲ! ಆತನಿಂದ 22 ಕ್ಯಾಲಿಬರ್ ಪಿಸ್ತೂಲ್ ಮತ್ತು 3 ಸುತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ದಿಮಾಪುರ್ ಪೊಲೀಸರು, ಯುವಕ ತನ್ನ ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ರೋಸ್ ಕೊಡುವ ಬದಲಿಗೆ ಗನ್ ನೀಡಿದ್ದಾನೆ. ಆದರೆ ಪ್ರಿಯತಮೆ ಅಷ್ಟೇನು ಇಂಪ್ರೆಸ್ ಆಗಿಲ್ಲ ಎಂದು ಬರೆದುಕೊಂಡಿದ್ದಾರೆ. ನಂತರ ವಿಚಾರಣೆ ನಡೆಸಿ ಯುವಕನನ್ನು ಬಂಧಿಸಿ ನಂತರ ತಾತ್ಕಾಲಿಕ ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ಬಳಿಕ ರಿಂಗ್‌ ನೀಡಿ ಯುವತಿಯನ್ನು ಆತ ಪ್ರಪೋಸ್ ಮಾಡಿದ್ದು, ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ರಿಂಗ್‌ ನೋಡಿ ಯುವತಿ ತುಂಬಾ ಖುಷಿಯಾಗಿರುವುದು ಚಿತ್ರದಲ್ಲಿ ಕಾಣಬಹುದು.