ಪೇಶಾವರ: ಬಾಲಿವುಡ್ ನಟರಾಗಿದ್ದ ರಾಜ್ ಕಪೂರ್ ಮತ್ತು ದಿಲೀಪ್ ಕುಮಾರ್ ಅವರ ಪೂರ್ವಜರ ಐತಿಹಾಸಿಕ ಮನೆಗಳನ್ನು ಖರೀದಿಸಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ.
ಈ ಮನೆಗಳು ಪಾಕಿಸ್ತಾನದ ಪೇಶಾವರದ ಹೃದಯಭಾಗದಲ್ಲಿದೆ. ಇಲ್ಲಿಯ ಖೈಬರ್ ಪಖ್ತೂನ್ ಖವಾದ ಪ್ರಾಂತ್ಯದಲ್ಲಿ ಇದೆ. ಇಲ್ಲಿರುವ ನಟರ ಪೂರ್ವಜರ ಐತಿಹಾಸಿಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಒಡೆಯಬೇಕಾದ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಖೈಬರ್ ಪಾಖ್ತುನ್ ಖವಾ ಪ್ರಾಂತ್ಯದ ಪುರಾತತ್ವ ಇಲಾಖೆ ಈ ಎರಡು ಕಟ್ಟಡಗಳನ್ನು ಖರೀದಿಸಲು ಅಗತ್ಯವಾದ ಹಣಕಾಸು ಬಿಡುಗಡೆಗೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಈ ಎರಡು ಮನೆಗಳನ್ನು ರಾಷ್ಟ್ರೀಯ ಪಾರಂಪರಿಕ ತಾಣವನ್ನಾಗಿ ಘೋಷಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಐತಿಹಾಸಿಕ ಕಟ್ಟಡಗಳಿಗೆ ಎಷ್ಟು ವೆಚ್ಚ ತಗಲಬಹುದು ಎಂಬ ಬಗ್ಗೆ ಮಾಹಿತಿ ನೀಡುವಂತೆ ಪೇಶಾವರದ ಜಿಲ್ಲಾಧಿಕಾರಿಗೆ ಈಗಾಗಲೇ ಪತ್ರ ರವಾನಿಸಲಾಗಿದೆ ಎನ್ನಲಾಗಿದೆ.
ಯಾವುದೀ ಮನೆಗಳು?
ದಿಲೀಪ್ ಕುಮಾರ್ ಅವರ ಪೂರ್ವಜರ ಮನೆ ನೂರು ವರ್ಷಕ್ಕಿಂತ ಹಿಂದೆಯೇ ಕಟ್ಟಲಾಗಿದೆ. ಕ್ವಿಸ್ಸಾ ಖಾವಾನಿ ಬಜಾರ್ನಲ್ಲಿ ಈ ಮನೆ ಇದೆ. ಈ ಮನೆಯನ್ನು 2014ರಲ್ಲಿ ನವಾಜ್ ಷರೀಫ್ ಸರ್ಕಾರ ರಾಷ್ಟ್ರೀಯ ಪಾರಂಪರಿಕ ತಾಣ ಎಂದು ಘೋಷಿಸಿತ್ತು.
ಇನ್ನು ಇದೇ ಪ್ರದೇಶದಲ್ಲಿ ಇರುವ ರಾಜ್ಕಪೂರ್ ಅವರ ಪೂರ್ವಜರ ಮನೆಯನ್ನು ಕಪೂರ್ ಹವೇಲಿ ಎಂದು ಕರೆಯಲಾಗುತ್ತಿದೆ. ಈ ಮನೆಯನ್ನು 1918 ಮತ್ತು 1922ರ ನಡುವೆ ದಂತಕತೆ ನಟ ಕಪೂರ್ ಅಜ್ಜ ದೀವಾನ್ ಬಾಶೇವರ್ನಾಥ್ ಕಪೂರ್ ಕಟ್ಟಿಸಿದ್ದರು. ಈ ಮನೆಯಲ್ಲಿ ಕಪೂರ್ ಮತ್ತು ಅವರ ಚಿಕ್ಕಪ್ಪ ತ್ರಿಲೋಕ್ ಕಪೂರ್ ಜನಿಸಿದ್ದರು.
ಈ ಎರಡು ಮನೆಗಳ ಮಾಲೀಕರು ಹಲವಾರು ಬಾರಿ ಒಡೆಯಲು ಯತ್ನಿಸಿದ್ದು, ಇದಲ್ಲಿ ಕಮರ್ಷಿಯಲ್ ಪ್ಲಾಜಾ ನಿರ್ಮಿಸಲು ಸಿದ್ದತೆ ನಡೆಸಿದ್ದರು. ಆದರೆ ಪುರಾತತ್ವ ಇಲಾಖೆ ಅದಕ್ಕೆ ಅವಕಾಶ ನೀಡದೆ, ಐತಿಹಾಸಿಕ ಪ್ರಾಮುಖ್ಯ ನೀಡಲು ನಿರ್ಧರಿಸಿ ಮನೆ ಧ್ವಂಸಕ್ಕೆ ತಡೆಯೊಡ್ಡಿರುವುದಾಗಿ ತಿಳಿಸಿದೆ ಎನ್ನಲಾಗಿದೆ.