ನ್ಯೂಸ್

ಅವರಿವರ ಬಳಿ ಹಣ ಪಡೆದು ಭರ್ಜರಿಯಾಗಿ ಮದ್ವೆಯಾದ- ಸಾಲ ತೀರಿಸಲಾಗದೇ ಪೊಲೀಸ್ ಅತಿಥಿಯಾದ...!

ಬೆಂಗಳೂರು: ಮದುವೆ ಸಾಲ ತೀರಿಸುವ ಉದ್ದೇಶಕ್ಕಾಗಿ ಸ್ನೇಹಿತರೊಂದಿಗೆ ಸೇರಿ ಸರಗಳ್ಳತನಕ್ಕೆ ಇಳಿದಿದ್ದ ಆರೋಪಿ ಸೇರಿ ಮೂವರು ರಾಮಮೂತಿರ್ನಗರ ಪೊಲೀಸರ ಬಲೆಗೆ ಬಿದಿದ್ದಾರೆ.

ಆಡುಗೋಡಿಯ ಅಪ್ಪಯ್ಯ(32), ಹೊಸಕೋಟೆಯ ಶಿವಕುಮಾರ್​ (23), ಗುಣಶೇಖರ್​ (34) ಬಂಧಿತರು.

ಆರೋಪಿ ಅಪ್ಪಯ್ಯ ಕೆಲ ತಿಂಗಳ ಹಿಂದೆ ವಿವಾಹವಾಗಿದ್ದ. ವಿವಾಹ ಸಮಾರಂಭಕ್ಕಾಗಿ ಪರಿಚಿತರ ಬಳಿ ಲಕ್ಷಾಂತರ ರೂ. ಸಾಲ ಮಾಡಿದ್ದ. ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ ಅಪ್ಪಯ್ಯಗೆ ಸಾಲ ತೀರಿಸಲಾಗದೇ ಕಳ್ಳತನಕ್ಕೆ ಇಳಿದಿದ್ದ. ಈ ಹಿಂದೆ ಸರಕಳ್ಳತನ ನಡೆಸಿ ಜೈಲು ಸೇರಿದ್ದ. ಜೈಲಿನಲ್ಲಿ ಇತರ ಆರೋಪಿಗಳಾದ ಶಿವಕುಮಾರ್​, ಗುಣಶೇಖರ್​ ಪರಿಚಿತರಾಗಿದ್ದರು. ಇತ್ತೀಚೆಗೆ ಜೈಲಿನಿಂದ ಹೊರ ಬಂದು ಮೂವರೂ ರಾಮಮೂತಿರ್ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ, ಮನೆಗಳ್ಳತನ ನಡೆಸುತ್ತಿದ್ದರು.

ಸಿಕ್ಕಿಬಿದ್ದಿದ್ದು ಹೇಗೆ ?

ಹೊರಮಾವು ನಿವಾಸಿ ಚಿನ್ನಮ್ಮ ಮಾ.11ರಂದು ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಮನೆ ಸಮೀಪವಿರುವ ದೇವಾಲಯಕ್ಕೆ ಹೋಗಿ ಮನೆಗೆ ಆಟೋದಲ್ಲಿ ವಾಪಾಸ್ಸಾಗಿದ್ದರು. ಮನೆಯ ಮುಂಬಾಗ ಇಳಿದು ಮನೆಯೊಳಗೆ ಹೋಗಬೇಕೆನ್ನುವಷ್ಟರಲ್ಲಿ ಬೈಕ್​ನಲ್ಲಿ ಬಂದಿದ್ದ ಆರೋಪಿಗಳು ಇವರ ಕತ್ತಿನಲ್ಲಿದ್ದ 1.50 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ರಾಮಮೂತಿರ್ನಗರ ಪೊಲೀಸರು ಸ್ಥಳಿಯ ಸಿಸಿಕ್ಯಾಮರಾಗಳನ್ನು ಪರಿಶೀಲಿಸಿದಾಗ ಆರೋಪಿ ಶಿವಕುಮಾರ್​ನ ಮುಖ ಅಸ್ಪಷ್ಟವಾಗಿ ಕಂಡು ಬಂದಿತ್ತು. ಈ ಸುಳಿವಿನ ಮೇರೆಗೆ ಈತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಈತ ನೀಡಿದ ಮಾಹಿತಿ ಆಧರಿಸಿ ಅಪ್ಪಯ್ಯ, ಗುಣಶೇಖರ್​ನನ್ನು ಬಂಧಿಸಲಾಗಿದೆ. ಸದ್ಯ ಮೂವರೂ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.