ನ್ಯೂಸ್

ಹುಡುಗಿನೇ ಸಿಗ್ತಿಲ್ಲ ಎಂದು ಊರ ತುಂಬಾ ವಧು ಬೇಕು ಬ್ಯಾನರ್​ ಹಾಕಿಸಿದ ಇಂಜಿನಿಯರ್​... ಆದ್ರೆ ಆಗಿದ್ದೇನೆಂದ್ರೆ...

ಚೆನ್ನೈ: ಮದುವೆಯಾಗಲು ಎಷ್ಟೋ ಗಂಡುಮಕ್ಕಳಿಗೆ ಹುಡುಗಿನೇ ಸಿಗುತ್ತಿಲ್ಲ, ಹುಡುಗಿಯರ ನಿರೀಕ್ಷೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಎಷ್ಟೋ ಯುವಕರು ಅವಿವಾಹಿತರಾಗಿಯೇ ಉಳಿಯುವ ಸ್ಥಿತಿ ಬಂದಿದೆ. ಉದ್ಯೋಗ ಇಲ್ಲದವರಿಗೆ ಮಾತ್ರವಲ್ಲದೇ ಒಳ್ಳೆಯ ಉದ್ಯೋಗದಲ್ಲಿ ಇರುವ ಕೆಲವು ಯುವಕರಿಗೂ ಹುಡುಗಿ ಸಿಗದ ಸ್ಥಿತಿ ಇದೆ. ಇದೇ ಕಾರಣಕ್ಕೆ ಕೆಲವು ಯುವಕರು ಮನನೊಂದು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ.

ಆದರೆ ಮಧುರೈನ ವಿಲ್ಲುಪುರಂನ ಎಂಎಸ್ ಜಗನ್ ಎಂಬ 27 ವರ್ಷದ ಇಂಜಿನಿಯರ್ ಒಬ್ಬರು ಮಾತ್ರ ಡಿಫರೆಂಟ್​ ಐಡಿಯಾ ಮಾಡಿದ್ದಾರೆ. ಅದೇನೆಂದರೆ, ಎಂ.ಎಸ್ ಜಗನ್‌ ಎಂಬ ಇಂಜಿನಿಯರ್​ಗೆ ಎಲ್ಲಿ ಹೋದರೂ ಮದುವೆಯಾಗಲು ಹುಡುಗಿ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಇವರು ಊರ ತುಂಬೆಲ್ಲಾ ಬ್ಯಾನರ್​ ಹಾಕಿ ಹುಡುಗಿ ಬೇಕು ಎಂದು ಬರೆದಿದ್ದಾರೆ. ಮ್ಯಾಟ್ರಿಮೋನಿ ಸೈಟ್​ಗಳು ಸೇರಿದಂತೆ ಹಲವು ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಹುಡುಗಿ ಸಿಗಲಿಲ್ಲ ಎಂಬ ಕಾರಣಕ್ಕೆ ಈಪ್ಲ್ಯಾನ್​ ಮಾಡಿದ್ದಾರೆ.

ಪೋಸ್ಟರ್‌ಗಳಲ್ಲಿ ಜಗನ್ ಅವರ ಫೋಟೋ ಮತ್ತು ಅವರ ಹೆಸರು, ಜಾತಿ, ಸಂಬಳ, ವೃತ್ತಿ, ವಿಳಾಸ ಮತ್ತು ಅವರು ತುಂಡು ಭೂಮಿ ಹೊಂದಿದ್ದಾರೆ ಎಂಬ ವಿವರಗಳನ್ನು ಹೊಂದಿದೆ. ನಾನು ಕಳೆದ ಐದು ವರ್ಷಗಳಿಂದ ವಧುವನ್ನು ಹುಡುಕುತ್ತಿದ್ದೇನೆ, ಆದರೆ ಯಶಸ್ವಿಯಾಗಲಿಲ್ಲ. ನಾನು ಅನೇಕ ಪೋಸ್ಟರ್‌ಗಳನ್ನು ವಿನ್ಯಾಸಗೊಳಿಸಿದ್ದೇನೆ. ನಾನು ನನಗಾಗಿ ಒಂದನ್ನು ಏಕೆ ವಿನ್ಯಾಸಗೊಳಿಸಬಾರದು ಎಂದು ಯೋಚಿಸಿದೆ ಎಂದು ಹೇಳಿರುವ ಜಗನ್​, ಈ ಐಡಿಯಾ ಮಾಡಿದ್ದಾರೆ.

ಇಷ್ಟೆಲ್ಲಾ ಮಾಡಿದ ಮೇಲೆ ಹುಡುಗಿ ಹುಡುಕಿ ಬಂದಳು ಎಂದುಕೊಂಡರೆ ಅದು ತಪ್ಪು. ಹುಡುಗಿಯ ಬದಲು ಮದುವೆ ದಲ್ಲಾಳಿಗಳಿಂದ ಕರೆಗಳು ಬರುತ್ತಿವೆಯಂತೆ. ಹುಡುಗಿ ಅಥವಾ ಆಕೆಯ ಮನೆಯವರು ನನ್ನನ್ನು ಹುಡುಕಿಕೊಂಡು ಬರುತ್ತಾರೆ ಎಂದುಕೊಂಡರೆ ಬರುತ್ತಿರುವುದು ದಲ್ಲಾಳಿಗಳು ಎಂದು ದುಃಖ ತೋಡಿಕೊಳ್ಳುತ್ತಿದ್ದಾರೆ ಜಗನ್.

ಕೆಲವೊಬ್ಬರು ಪೋಸ್ಟರ್ ಕಲ್ಪನೆಯನ್ನೂ ಅಪಹಾಸ್ಯ ಮಾಡುತ್ತಾರೆ, ಆದರೆ ನಾನು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. 90ರ ದಶಕದಲ್ಲಿ ಜನಿಸಿದವರಿಗೆ ಮದುವೆಯೆಂಬುದು ಕಠಿಣ ಅವಧಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.