ಸೇಲಂ: ತಮಿಳುನಾಡಿನಲ್ಲಿ ಈಗ ಸಿಹಿ ಹಗರಣ ಭಾರಿ ಸುದ್ದಿ ಮಾಡುತ್ತಿದೆ. ಎಐಎಡಿಎಂಕೆ ಮಾಜಿ ಸಚಿವ ಕೆ.ಟಿ. ರಾಜೇಂದ್ರ ಬಾಲಾಜಿ ಅವರ ಸುತ್ತ ಈ ಹಗರಣ ಸುತ್ತಿಕೊಂಡಿದೆ. ಕಳೆದ ವರ್ಷ ಸರ್ಕಾರಿ ಹಾಲಿನ ಉತ್ಪಾದಕ ಆವಿನ್ ಘಟಕದಿಂದ ಸರಿ ಸುಮಾರು 1.50 ಟನ್ ಸಿಹಿ ತಿನಿಸುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ತನಿಖೆಗೆ ಪಟ್ಟು ಹಿಡಿಯಲಾಗಿದೆ.
ಕಳೆದ ವರ್ಷ ದೀಪಾವಳಿ ಹಬ್ಬದ ವೇಳೆ ಬಾಲಾಜಿ ಅವರು ಹಣ ಪಾವತಿಸದೇ 1.50 ಟನ್ ಸಿಹಿ ತಿನಿಸುಗಳನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ನಂತರ ಅದನ್ನು ವಿತರಿಸಿದ್ದಾರೆ ಎಂದಿರುವ ಹೈನುಗಾರಿಕೆ ಸಚಿವ ಎಸ್. ಎಂ. ನಾಸರ್, ತಮ್ಮ ಬಳಿ ಇದಕ್ಕೆ ಸಂಬಂಧಪಟ್ಟ ಸಾಕಷ್ಟು ಸಾಕ್ಷ್ಯಧಾರಗಳಿವೆ. ಈ ಬಗ್ಗೆ ತನಿಖೆ ಮಾಡಲಾಗುವುದು ಎಂದಿದ್ದಾರೆ.
ಡೈರಿ ಘಟಕದಲ್ಲಿ ಉದ್ಯೋಗ ನೇಮಕಾತಿಯಲ್ಲೂ ಅವ್ಯವಹಾರ ನಡೆದಿದೆ. ದಲ್ಲಾಳಿ ಹಾಗೂ ಮಧ್ಯವರ್ತಿಗಳ ಮುಖಾಂತರ ಕೆಲಸ ನೀಡಲಾಗಿದೆ ಎಂದೂ ಆರೋಪಿಸಿರುವ ನಾಸರ್, ಈ ಬಗ್ಗೆಯೂ ಸೂಕ್ತ ತನಿಖೆ ಆಗಲಿದೆ. ಸರ್ಕಾರದ ವತಿಯಿಂದ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.