ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಕಳೆದ ಸೆಪ್ಟೆಂಬರ್ 4ರಂದು ಸಿಸಿಬಿ ಪೊಲೀಸರಿಂದ ಬಂಧಿಯಾಗಿದ್ದು, ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇರುವ ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂಕೋರ್ಟ್ ಕೂಡ ಇಂದು ಜಾಮೀನು ನೀಡಲಿಲ್ಲ.
ಹೈಕೋರ್ಟ್ ಜಾಮೀನು ನೀಡದೇ ಇರುವುದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಜನವರಿ ಮೊದಲ ವಾರಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ದಸರಾ, ದೀಪಾವಳಿಯನ್ನು ಜೈಲಿನಲ್ಲಿಯೇ ಆಚರಿಸಿರುವ ನಟಿ, ಇದೀಗ ಹೊಸ ವರ್ಷವನ್ನೂ ಜೈಲಿನಲ್ಲಿಯೇ ಆಚರಿಸುವಂತಾಗಿದೆ.
ಈ ಅರ್ಜಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರ ಹಾಗೂ ಸಿಸಿಬಿ ಪೊಲೀಸರಿಗೆ ನೋಟಿಸ್ ನೀಡಿರುವ ಸುಪ್ರೀಂಕೋರ್ಟ್ ಒಂದು ತಿಂಗಳು ವಿಚಾರಣೆಯನ್ನು ಮುಂದೂಡಿದೆ.
ಕಳೆದ ಮೂರು ತಿಂಗಳಿನಿಂದ ರಾಗಿಣಿ ಜೈಲು ವಾಸ ಅನುಭವಿಸುತ್ತಿದ್ದಾರೆ. ಇವರ ವಿರುದ್ಧ ಇರುವ ಆರೋಪಗಳು ಸುಳ್ಳು. ಇವರನ್ನು ಬಿಡುಗಡೆ ಮಾಡಿ ಎಂದು ರಾಗಿಣಿ ಪರ ವಕೀಲರು ಮನವಿ ಮಾಡಿಕೊಂಡಿದ್ದರು. ಆದರೆ ಕೋರ್ಟ್ ಇಂದು ಜಾಮೀನು ನೀಡಲು ನಿರಾಕರಿಸಿ ವಿಚಾರಣೆ ಮುಂದೂಡಿದರು.
ಇತ್ತ ಅನಾರೋಗ್ಯದ ಕಾರಣ ನೀಡಿ ಮತ್ತೋರ್ವ ನಟಿ ಸಂಜನಾ ಗಲ್ರಾನಿ ಜಾಮೀನು ಸಲ್ಲಿಸಿದ್ದಾರೆ. ಸಂಜನಾ 2018ರಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಸರ್ಜರಿಗೆ ಒಳಗಾಗಿದ್ದರು. 2019ರಿಂದ ಅಸ್ತಮಾ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಚಳಿಗಾಲದಲ್ಲಿ ಅಸ್ತಮಾ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಬಂಧನಕ್ಕೊಳಗಾದ ನಂತರ ಸೂಕ್ತ ಚಿಕಿತ್ಸೆ ದೊರೆತಿಲ್ಲ' ಎಂದು ಅವರ ಪರ ವಕೀಲರು ವಾದ ಮಂಡಿಸುತ್ತಿದ್ದು ಇದರ ಆದೇಶ ಹೊರಬರಬೇಕಿದೆ.