ನ್ಯೂಸ್

ರೆಕ್ಕೆ ಕಟ್ಟಿ, ಗುರುತು ಮರೆಮಾಚಿ ಬಡವರಿಗೆ ಅನ್ನ ನೀಡೋ ಬ್ಯಾಟ್‌ಮ್ಯಾನ್‌

suchetana

ಸ್ಯಾಂಟಿಗೋ (ಚಿಲಿ): ಸೂಪರ್‌ಮ್ಯಾನ್‌, ಬ್ಯಾಟ್‌ಮ್ಯಾನ್‌ಗಳ ಬಗ್ಗೆ ನೀವೆಲ್ಲಾ ಕೇಳೇ ಇರುತ್ತೀರಿ. ಯಾರೋ ಕಷ್ಟದಲ್ಲಿದ್ದಾಗ ಬಂದು ಸಹಾಯ ಮಾಡುವ ಒಂದು ಪಾತ್ರವಿದು. ಅದರಲ್ಲಿಯೂ ಮಕ್ಕಳಿಗಂತೂ ತುಂಬಾ ಅಚ್ಚುಮೆಚ್ಚು ಈತ.

ಅದೇ ಇನ್ನೊಂದೆಡೆ, ಸಣ್ಣ ಸಹಾಯ ಮಾಡಿದರೂ ಫೋಟೋ ತೆಗೆಸಿಕೊಂಡು ಪಬ್ಲಿಸಿಟಿ ಬಯಸುವವರು ಅದೆಷ್ಟೋ ಮಂದಿ ಇದ್ದಾರೆ. ಕೆಲಸ ಮಾಡದಿದ್ದರೂ ಮಾಡಿದಂತೆ ಪೋಸ್‌ ಕೊಡುವವರಿಗೂ ಕಮ್ಮಿ ಏನಿಲ್ಲ.

ಇವೆಲ್ಲಾ ಇಲ್ಲಿ ಯಾಕೆ ಎಂದರೆ, ಚಿಲಿ ದೇಶದ ಸ್ಯಾಂಟಿಗೋದಲ್ಲಿ ಒಬ್ಬ ವ್ಯಕ್ತಿ ಇದ್ದಾನೆ. ಅವನ್ಯಾರು, ಎಲ್ಲಿಂದ ಬಂದಿದ್ದಾನೆ, ಅವನ ಮೂಲ ಯಾವುದು ಯಾರಿಗೂ ಗೊತ್ತಿಲ್ಲ. ಆದರೆ ನಿರಾಶ್ರಿತರು ಎಲ್ಲೆಲ್ಲಿ ಇದ್ದಾರೋ ಅವರ ಬಳಿ ಹೋಗಿ ಅನ್ನ ಆಹಾರ ಪೂರೈಕೆ ಮಾಡುತ್ತಿದ್ದಾನೆ.

ಇವನಿಗೆ ಪ್ರೀತಿಯಿಂದ ಎಲ್ಲರೂ ಬ್ಯಾಟ್ಸ್‌ಮ್ಯಾನ್ ಎಂದೇ ಕರೆಯುತ್ತಾರೆ. ಏಕೆಂದರೆ ಈತ ಯಾವತ್ತೂ ತನ್ನ ಪರಿಚಯವನ್ನು ಮಾಡಿಯೇ ಇಲ್ಲ. ಮುಖಕ್ಕೆ ಮಾಸ್ಕ್‌ ಹಾಕಿಕೊಂಡಿರುವ ಈ ಬ್ಯಾಟ್‌ಮನ್, ರಾಜಧಾನಿ ನಗರಿಯಲ್ಲಿರುವ ಡಝನ್‌ಗಟ್ಟಲೇ ಮಂದಿಗೆ ಬಿಸಿಯೂಟವನ್ನು ವಿತರಿಸುತ್ತಾ ಬಂದಿದ್ದಾನೆ.

ಈ ಹಿಂದೆ ಕೂಡ ನಿರಾಶ್ರಿತರು, ಅಗತ್ಯ ಇರುವವರಿಗೆ ಆಹಾರ ಪೂರೈಕೆ ಮಾಡುತ್ತಿದ್ದ ಈತ ಕರೊನಾ ವೈರಸ್‌ನಿಂದ ಕಂಗೆಟ್ಟು ಹೋಗಿರುವ ಚಿಲಿ ದೇಶದ ನಿವಾಸಿಗಳಿಗೆ ಗೊತ್ತು, ಪರಿಚಯವಿಲ್ಲದೇ, ತನ್ನ ಮುಖವನ್ನೂ ಮರೆಮಾಚಿಕೊಂಡು ಹೋಗಿ ಸಹಾಯ ಮಾಡುತ್ತಿದ್ದಾನೆ.

"ನಿಮ್ಮ ಸುತ್ತಲೂ ಗಮನಿಸುತ್ತಲೇ ಇರಿ, ಅಗತ್ಯವಿದ್ದವರಿಗೆ ನಿಮ್ಮ ಸ್ವಲ್ಪ ಸಮಯ, ಆಹಾರ, ಆಶ್ರಯ ಹಾಗೂ ಮೆಚ್ಚುಗೆಯ ಮಾತುಗಳನ್ನು ನೀಡಲು ಯತ್ನಿಸಿ" ಎಂದು ಎಲ್ಲರಿಗೂ ಸಂದೇಶವನ್ನಷ್ಟೇ ನೀಡುವ ಈತ ಯಾರೆಂದು ತಿಳಿಯುವ ಕೌತುಕ ಹಲವರಿಗೆ. ಸದ್ಯ ಈತ ಎಲ್ಲರ ಪಾಲಿನ ದೇವಮಾನವ, ಬ್ಯಾಟ್ಸ್‌ಮನ್‌.