ಡಿಜೆ ಹಳ್ಳಿ ಗಲಭೆ ಆರೋಪಿ, ಎಸ್​ಡಿಪಿಐ ಕಾರ್ಯಕರ್ತ ಖಾಲಿದ್​ ಅರೆಸ್ಟ್

dj halli roits AccusedKhalid
Published on

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ, ಕಾವಲ್​ಭೈರಸಂದ್ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.

‘ಗಲಭೆಯ ಪ್ರಮುಖ ಆರೋಪಿ, ಎಸ್​ಡಿಪಿಐ ಕಾರ್ಯಕರ್ತ ಖಾಲಿದ್​​ನನ್ನು ಬುಧವಾರ ತಡರಾತ್ರಿ ಡಿಜೆ ಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಡಿಜೆ ಹಳ್ಳಿಯ ರೋಷನ್​ನಗರ ನಿವಾಸಿ ಖಾಲೀದ್, ಎಸ್​ಡಿಪಿಐ ಕಾರ್ಯಕರ್ತರನ್ನು ಒಗ್ಗೂಡಿಸಿ ಮುಜಾಮಿಲ್ ಮತ್ತು ಅಯಾಜ್, ಆಫ್ನಾನ್ ಜೊತೆಗೂಡಿ ಗಲಭೆ ಮಾಡಿಸಿದ್ದ ಆರೋಪ ಎದುರಿಸುತ್ತಿದ್ದಾನೆ.

ಖಾಲಿದ್​ ​ನನ್ನು ತಡರಾತ್ರಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಖಾಲಿದ್​ ಜೊತೆ ಹಲವು ಪ್ರಮುಖ ರಾಜಕೀಯ ನಾಯಕರು ಸಂಪರ್ಕದಲ್ಲಿರುವ ಮಾಹಿತಿ ಸಿಕ್ಕಿದೆ. ಗಲಭೆ ನಡೆಯುವ ದಿನ ಖಾಲಿದ್ ಯುಟ್ಯೂಬ್ ಚಾನೆಲ್​ವೊಂದಕ್ಕೆ ಮಾತನಾಡಿರುವ ವಿಡಿಯೋ ವೈರಲ್​ ಆಗಿದೆ.

ಮೊನ್ನೆಯಷ್ಟೇ(ಮಂಗಳವಾರ) ಗಲಭೆಯ ರೂವಾರಿ ಎನ್ನಲಾದ ವಾಜೀದ್ ಸಿಸಿಬಿ ಬಲೆಗೆ ಬಿದ್ದಿದ್ದ. ಈತ​ನನ್ನು ತೀವ್ರ ವಿಚಾರಣೆ ನಡೆಸಿದಾಗ ತನ್ನ ಸಹಚರರ ಬಗ್ಗೆ ಈತ ಸುಳಿವು ನೀಡಿದ್ದ. ಈ ಆಧಾರದ ಮೇಲೆ ನಗರದ ರಹಸ್ಯ ಸ್ಥಳವೊಂದರಲ್ಲಿ ಅಡಗಿ ಕುಳಿತಿದ್ದ ತೌಸಿಫ್​​, ಫಾಜಿಲ್​, ಅಫ್ಜಲ್​ ಹಾಗೂ ಪಾಷಾ ಎಂಬುವವರನ್ನೂ ಬುಧವಾರ ಬಂಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net