ಬೆಂಗಳೂರು: 1983ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಘಟನೆಯನ್ನು ಆಧರಿಸಿ ತಯಾರಾಗಿರುವ ‘83’ ಸಿನಿಮಾ ಶೀಘ್ರದಲ್ಲಿ ತೆರೆ ಕಾಣಲಿದೆ. ಈ ಚಿತ್ರದಲ್ಲಿ ಕಪಿಲ್ ದೇವ್ ಪಾತ್ರವನ್ನು ರಣವೀರ್ ಸಿಂಗ್ ಮಾಡಿದ್ದರೆ, ನಟ ಸುದೀಪ್ ಆ ಸಿನಿಮಾವನ್ನು ಕರ್ನಾಟಕದಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಈ ಚಿತ್ರ ಕನ್ನಡಕ್ಕೂ ಡಬ್ ಆಗಿ ತೆರೆಕಾಣುತ್ತಿದೆ. ಈ ಚಿತ್ರದ ಮೂಲಕ ಸುದೀಪ್ ಅವರ 36 ವರ್ಷಗಳ ಕನಸೊಂದು ನನಸಾಗಿದೆ!
ಈ ಕುರಿತು ಅವರೇ ಟ್ವೀಟ್ ಮೂಲಕ ಇದನ್ನು ಬಹಿರಂಗಪಡಿಸಿದ್ದಾರೆ. ಅದೇನೆಂದರೆ ಕಪಿಲ್ ದೇವ್ ಅಭಿಮಾನಿಯಾಗಿರುವ ಸುದೀಪ್ ಅವರ ಜತೆ ಫೋಟೋ ತೆಗೆಸಿಕೊಳ್ಳಬೇಕು ಎಂದು ಬಾಲ್ಯದಿಂದಲೂ ಅಂದುಕೊಳ್ಳುತ್ತಿದ್ದರಂತೆ. ಆ ಆಸೆ ಈಗ ಇಡೇರಿದ್ದು, ತಮಗೆ ಎಲ್ಲಿಲ್ಲದ ಖುಷಿ ತಂದಿದೆ ಎಂದು ಹೇಳಿದ್ದಾರೆ. 36 ವರ್ಷಗಳ ಬಳಿಕ ಆ ಕ್ಷಣ ಬಂತು ಎಂದು ಸುದೀಪ್ ಟ್ವಿಟರ್ ಮೂಲಕ ವಿವರಿಸಿದ್ದಾರೆ.
ಚಿತ್ರಕ್ಕೆ ಸಂಬಂಧಿಸಿದಂತೆ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಿಸಿದ ಸುದೀಪ್, ಇಂದು ಕಪಿಲ್ ದೇವ್ ಅವರ ಜತೆಗಿನ ಫೋಟೋ ಅನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ತಮ್ಮ ಕನಸು ನನಸಾಗಿರುವ ಬಗ್ಗೆ ಬರೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಪಿಲ್ ದೇವ್, ಸುದೀಪ್, ನಿರ್ದೇಶಕ ಕಬೀರ್ ಖಾನ್, ರಣವೀರ್ ಸಿಂಗ್ ಮುಂತಾದವರು ಹಾಜರಿದ್ದರು.
ಈ ಬಗ್ಗೆ ವಿವರಿಸಿದ ಸುದೀಪ್, ’1987-88 ಸಮಯ. ಕಪಿಲ್ ದೇವ್ ಅವರನ್ನು ನೋಡೋಕೆ ಪಾಲಕರು ಕರೆದುಕೊಂಡು ಹೋಗಿದ್ದರು. ಅಂದು ಕಪಿಲ್ ದೇವ್ ಒಬ್ಬರೇ ನಡೆದುಕೊಂಡು ಹೋಗುತ್ತಿದ್ದರು. ಓಡಿಹೋಗಿ ನಾನು ಅವರ ಕೋಟ್ ಎಳೆದೆ. ಆಗ ನನ್ನ ಬಳಿ ಒಂದು ಚಿಕ್ಕ ಕ್ಯಾಮೆರಾ ಇತ್ತು. ನಿಮ್ಮ ಜತೆ ಫೋಟೋ ಬೇಕು ಅಂತ ಹೇಳಿದೆ. ಫೋಟೋ ತೆಗೆಯಲು ನನ್ನ ಅಕ್ಕ ನನ್ನ ಹಿಂದೆ ಓಡಿ ಬಂದರು. ಆದರೆ ದುರದೃಷ್ಟ ಎಂದರೆ, ಕ್ಯಾಮೆರಾ ವರ್ಕ್ ಆಗುತ್ತಿರಲಿಲ್ಲ. ನಾನು ಅಳಲು ಆರಂಭಿಸಿದೆ. ಅಂದು ಅವರು ಕಣ್ಣೀರು ಒರೆಸಿ, ನನಗೆ ಸಮಾಧಾನ ಮಾಡಿದ್ದರು. ಮುಂದೊಂದು ದಿನ ನಾವು ಜತೆಯಾಗಿ ಫೋಟೋ ತೆಗೆದುಕೊಳ್ಳೋಣ ಅಂತ ಹೇಳಿದ್ದರು. ಆ ದಿನ ಈಗ ಬಂದಿದೆ’ ಎಂದು ಕಿಚ್ಚ ಸುದೀಪ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಒಬ್ಬ ಕ್ರಿಕೆಟ್ ಪ್ರೇಮಿಯಾಗಿ, ಭಾರತೀಯನಾಗಿ ಥಿಯೇಟರ್ನಲ್ಲಿ ಈ ಚಿತ್ರವನ್ನು ನೋಡಿ ಎಂಜಾಯ್ ಮಾಡಲು ಬಯಸುತ್ತೇನೆ. ಇಂಥ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ನಿರ್ದೇಶಕ ಕಬೀರ್ ಖಾನ್ ಮತ್ತು ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ಭಾರತ ವಿಶ್ವಕಪ್ ಗೆದ್ದಾಗ ಎಷ್ಟು ಖುಷಿ ಆಗಿತ್ತೋ ಅದೇ ರೀತಿ ಈ ಸಿನಿಮಾ ತೆರೆಕಾಣುತ್ತಿರುವುದಕ್ಕೆ ಖುಷಿ ಆಗುತ್ತಿದೆ ಎಂದು ಸುದೀಪ್ ಹೇಳಿದ್ದಾರೆ.