ನವದೆಹಲಿ: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಹಿಂದುತ್ವ ಗೆಲ್ಲಲಿದೆ ಎಂದು ಕೂಡ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಧ್ಯಮವೊಂದಕ್ಕೆ ನಡೆಸಿರುವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2014ರ ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವ ಗೆದ್ದಿದೆ, 2019ರಲ್ಲಿಯೂ ಅದೇ ಗೆದ್ದಿದೆ, 2024ರಲ್ಲಿಯೂ ಗೆಲ್ಲಲಿದೆ ಎಂದಿದ್ದಾರೆ. ಮೋದಿಯವರನ್ನು ಪ್ರಧಾನ ಮಂತ್ರಿಯಾಗಿ ನಾವೆಲ್ಲಾ ಸ್ವೀಕರಿಸಿದ್ದೇವೆ. ಮುಂದೆಯೇ ಸ್ವೀಕರಿಸಲಿದ್ದೇವೆ ಎಂದು ಭವಿಷ್ಯ ನುಡಿದಿದ್ದಾರೆ.
ಅದೇ ರೀತಿ, ಅಮೆರಿಕ ಚುನಾವಣೆಯಲ್ಲಿ ಮತ್ತೆ ಡೊನಾಲ್ಡ್ ಟ್ರಂಪ್ ಅವರೇ ಅಧ್ಯಕ್ಷರಾಗಬಹುದೆಂದು ಅಂದುಕೊಂಡಿರುವುದಾಗಿಯೂ ಹೇಳಿದ್ದಾರೆ.
ಆದರೆ ಕೆಲವೊಂದು ವಿಷಯಗಳಲ್ಲಿ ಸ್ವಾಮಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಕರೊನಾ ವೈರಸ್ನಿಂದ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಕುರಿತು ಮಾತನಾಡಿದ ಅವರು, ಕರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಪ್ರೋತ್ಸಾಹಕ ಪ್ಯಾಕೇಜ್ ಪರಿಹಾರ ಹಣ ಅಸಮರ್ಪಕವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕೇಂದ್ರ ಸರ್ಕಾರ ಪರಿಹಾರ ಘೋಷಿಸಿರುವ 21 ಟ್ರಿಲಿಯನ್ ಪರಿಹಾರ ಪ್ಯಾಕೇಜ್ನಲ್ಲಿ 1.2 ಟ್ರಿಲಿಯನ್ ಮಾತ್ರ ಪ್ರೋತ್ಸಾಹಕವಾಗಿದ್ದು ಉಳಿದವು ಹಣಕಾಸು ರಿಯಾಯಿತಿಗಳಾಗಿವೆ. ಕಳೆದ ನಾಲ್ಕೈದು ವರ್ಷಗಳಿಂದ ಹಣಕಾಸು ಕೊರತೆಯುಂಟಾಗಿದೆ. ಇದಕ್ಕೆ ಕಾರಣ ನೋಟು ಅಮಾನೀಕರಣ ಎಂದಿರುವ ಅವರು, ಇದನ್ನು ನಾನು ತೆರಿಗೆ ಭಯೋತ್ಪಾದನೆ ಎನ್ನುತ್ತೇನೆ ಎಂದಿದ್ದಾರೆ.
ಆದಾಯ ತೆರಿಗೆ ಕುರಿತು ಮಾತನಾಡಿದ ಅವರು, ಆದಾಯ ತೆರಿಗೆಯು ದಿನದಿಂದ ದಿನಕ್ಕೆ ಕಠಿಣವಾಗುತ್ತಲೇ ಹೋಗುತ್ತಿದೆ. ಜಿಎಸ್ ಟಿ, ಸರ್ಕಾರ ಜನರ ಕೈಗೆ ಹಣ ಹೇಗೆ ತಲುಪಬೇಕು ಎಂಬುದರ ಬಗ್ಗೆ ಯೋಚಿಸಬೇಕು ಎಂದಿದ್ದಾರೆ.
2014-15ರ ಆರ್ಥಿಕ ಸಾಲಿನಲ್ಲಿ ನಾವು ಶೇಕಡಾ 8ರಷ್ಟು ಬೆಳವಣಿಗೆ ಸಾಧಿಸಿದ್ದೆವು. ನಂತರ ವರ್ಷದಿಂದ ವರ್ಷಕ್ಕೆ ದೇಶದ ಅಭಿವೃದ್ಧಿ ದರ ಕುಂಠಿತವಾಗುತ್ತಾ ಸಾಗಿದ್ದು, 2019-20ರಲ್ಲಿ ಕಳೆದ ತ್ರೈಮಾಸಿಕದಲ್ಲಿ ಅಭಿವೃದ್ಧಿ ದರ ಕೇವಲ ಶೇಕಡಾ 3.1ರಷ್ಟಾಗಿದೆ. ಲಾಕ್ಡೌನ್ನಿಂದಾಗಿ ಮತ್ತಷ್ಟು ಸಮಸ್ಯೆಯುಂಟಾಗಿ ವ್ಯಾಪಾರ, ವಹಿವಾಟುಗಳು ಸ್ಥಗಿತಗೊಂಡವು ಎಂದಿದ್ದಾರೆ. ಕೋವಿಡ್ ಪರಿಸ್ಥಿತಿಯನ್ನು ಕೇಂದ್ರ ಚೆನ್ನಾಗಿ ನಿಭಾಯಿಸಿದೆ ಎಂದು ಕೂಡ ಇದೇ ವೇಳೆ ಶ್ಲಾಘಿಸಿದರು. ಆದರೆ ಲಾಕ್ಡೌನ್ ಹೇರುವ ಮುನ್ನ ಜನರಿಗೆ ತಯಾರಿ ಮಾಡಿಕೊಳ್ಳಲು ಕಾಲಾವಕಾಶ ನೀಡಬೇಕಾಗಿತ್ತು ಎಂದೂ ಅಭಿಪ್ರಾಯ ಪಟ್ಟರು.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಸಿಬಿಐ ತಡವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿತು ಎಂದು ಅಭಿಪ್ರಾಯಪಟ್ಟ ಸುಬ್ರಮಣಿಯನ್, ಸಾಕ್ಷ್ಯಾಧಾರಗಳನ್ನು ನಾಶಪಡಿಸಲು ವ್ಯವಸ್ಥಿತ ಪಿತೂರಿ ನಡೆಸಲಾಗಿದೆ. ಸಾಂದರ್ಭಿಕ ಸಾಕ್ಷಿಗಳ ಆಧಾರದ ಮೇಲೆ ಕೇಸು ವಿಚಾರಣೆ ಮುಂದುವರಿಸಬೇಕಷ್ಟೆ ಎಂದರು.