ನ್ಯೂಸ್

ಡಿಕೆಶಿ ಆರೋಗ್ಯಕ್ಕಾಗಿ ವೆಂಕಟೇಶ್ವರನಿಗೆ 1001 ತೆಂಗಿನಕಾಯಿ ಅರ್ಪಣೆ

ಬೆಂಗಳೂರು: ಕರೊನಾ ಸೋಂಕಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಅವರ ಬೆಂಬಲಿಗರು ಇಂದು ದೇವರಿಗೆ 1001 ತೆಂಗಿನ ಕಾಯಿ ಒಡೆದಿದ್ದಾರೆ.

ಬೆಂಗಳೂರಿನ ವೈಯಾಲಿಕಾವಲ್‌ ಸಮೀಪವಿರುವ ತಿರುಮಲ ತಿರುಪತಿ ದೇವಸ್ಥಾನದ ಎದುರಿನಲ್ಲಿ ಶಿವಕುಮಾರ್‌ ಬೆಂಬಲಿಗರು 1001 ತೆಂಗಿನಕಾಯಿ ಒಡೆದು ಅವರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ವಿಶೇಷ ಪೂಜೆ ಕೂಡ ಸಲ್ಲಿಸಲಾಯಿತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಜ್ವರ ಮತ್ತು ಬೆನ್ನುನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಆಗಸ್ಟ್.23ರಂದು ಸ್ವತಃ ಡಿಕೆಶಿಯವರು ಕರೊನಾವೈರಸ್ ಸೋಂಕಿನ ತಪಾಸಣೆಗೆ ಒಳಗಾಗಿದ್ದರು. ಆಗಸ್ಟ್.25ರಂದು ಬಂದ ವೈದ್ಯಕೀಯ ವರದಿಯಲ್ಲಿ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ವೈದ್ಯಕೀಯ ವರದಿ ಹೊರ ಬರುತ್ತಿದ್ದಂತೆ ಡಿಕೆಶಿ ಬೆಂಗಳೂರಿನ ಸುಗುಣ ಆಸ್ಪತ್ರೆಗೆ ದಾಖಲಾಗಿದ್ದರು.

ತಿರುಮಲ ತಿರುಪತಿ ದೇವಸ್ಥಾನದ ಎದುರಿನಲ್ಲಿ 1001 ತೆಂಗಿನಕಾಯಿಗಳನ್ನು ಒಡೆಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಡಿ.ಕೆ.ಶಿವಕುಮಾರ್ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಸುಗುಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಆರ್.ರವೀಂದ್ರ ನೇತೃತ್ವದಲ್ಲಿ ವಿವಿಧ ವಿಭಾಗಗಳ ತಜ್ಞರ ವಿಶೇಷ ತಂಡವು ಡಿ.ಕೆ.ಶಿವಕುಮಾರ್ ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ವಹಿಸಿದೆ.

https://www.vijayavani.net/s-tiktok-ceo-resignation/