ನ್ಯೂಸ್

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವಿರ ಅಡಿ ಪ್ರಪಾತಕ್ಕೆ ಬಿದ್ದರು!

ರಾಮಗಢ (ಮಧ್ಯಪ್ರದೇಶ): ಸೆಲ್ಫಿ ಚಟಕ್ಕೆ ಬಿದ್ದು ಬಲಿಯಾದವರು ಅದೆಷ್ಟೋ ಮಂದಿ. ಆದರೂ ಕೆಲವರಿಗೆ ಬುದ್ಧಿನೇ ಬರುವಂತೆ ತೋರುತ್ತಿಲ್ಲ.

ಅದೇ ರೀತಿಯ ದುರ್ಘಟನೆಯೊಂದು ಮಧ್ಯಪ್ರದೇಶದ ಬಾರ್ವಾನಿ ಜಿಲ್ಲೆಯಲ್ಲಿ ನಡೆದಿದೆ. ಮೊಬೈಲ್ ಫೋನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾಗ ಇಬ್ಬರು ಯುವಕರು ಒಂದು ಸಾವಿರ ಅಡಿ ಕಮರಿಗೆ ಬಿದ್ದು ಮೃತಪಟ್ಟಿದ್ದಾರೆ.

ಧಾರ್ ಜಿಲ್ಲೆಯ ದಾಹಿ ನಿವಾಸಿಗಳಾದ ದಿನೇಶ್ (25) ಮತ್ತು ರುವಬಂಟಿ (22) ಯುವಕರು ಮೃತಪಟ್ಟಿದ್ದಾರೆ. ಜಿಲ್ಲಾ ಕೇಂದ್ರದಿಂದ 50 ಕಿ.ಮೀ ದೂರದಲ್ಲಿರುವ ರಾಮಗಢದ ಕೋಟೆಯ ಸಮೀಪ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದರು ಈ ಯುವಕರು.

ಆದರೆ ಈ ಪ್ರದೇಶದಲ್ಲಿ ವಿಪರೀತ ಮಳೆಯಿತ್ತು. ಮಾತ್ರವಲ್ಲದೇ ಇವರು ಸೆಲ್ಫಿ ತೆಗೆದುಕೊಳ್ಳುವ ಸಮಯದಲ್ಲಿ ದಟ್ಟವಾದ ಮಂಜು ಇತ್ತು. ಬೆಟ್ಟದ ತುದಿಯಲ್ಲಿ ಸೆಲ್ಫಿಗಾಗಿ ಹೋದಾಗ ಮಂಜು ಇದ್ದುದರಿಂದ ನಿಲ್ಲುವ ಸ್ಥಳ ಸರಿಯಾಗಿ ಕಾಣಿಸುತ್ತಿರಲಿಲ್ಲ.

ಆಯತಪ್ಪಿ ಸಾವಿರ ಅಡಿಯಷ್ಟು ಕಂದಕದಲ್ಲಿ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.