More

    ಗಾಂಜಾ ಬೆಳೆಯಲು ಪಶ್ಚಿಮಘಟ್ಟ ಕಾಡುಗಳೇ ಫೇವರಿಟ್

    ಬೆಂಗಳೂರು: ಗಾಂಜಾ ಬೆಳೆಯುವುದಕ್ಕೆ ಪಶ್ಚಿಮಘಟ್ಟ ತಾಣಗಳೇ ಫೆವರಿಟ್. ಅತಿ ಹೆಚ್ಚು ಪ್ರಕರಣಗಳು ಮಲೆನಾಡು ಸೆರಗಿನ ಪ್ರದೇಶಗಳಲ್ಲಿ ಹಿಂದಿನಿಂದಲೂ ವರದಿಯಾಗುತ್ತಿವೆ.

    ಜೀವ ಭಯದ ಕಾರಣಕ್ಕೆ ದಟ್ಟ ಕಾಡಿನೊಳಗೆ ಯಾವ ಅಧಿಕಾರಿಗಳು ಬರುವುದಿಲ್ಲ ಎನ್ನುವ ಕಾರಣಕ್ಕೆ ದಂಧೆಕೋರರು, ಇಂಥಹ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಪೊಲೀಸ್ ಮತ್ತು ಅರಣ್ಯ ಇಲಾಖೆಯ ಲೋಪಗಳು ದಂಧೆಕೋರರಿಗೆ ವರದಾನವಾಗಿವೆ. ಇನ್ನು ಅರೆ ಮಲೆನಾಡು ಮತ್ತು ಬಯಲು ಸೀಮೆ ಪ್ರದೇಶಗಳಲ್ಲಿ ಅಲ್ಲೊಂದು, ಇಲ್ಲೊಂದು ಪ್ರಕರಣ ವರದಿಯಾಗುತ್ತಿದ್ದರೂ, ಗಂಭೀರ ಸ್ವರೂಪದ್ದಾಗಿರಲಿಲ್ಲ. ಆದರೆ, ಪೊಲೀಸರು ನಿರ್ಲಕ್ಷ್ಯದಿಂದ ಗಾಂಜಾ ದಂಧೆ ದೊಡ್ಡ ಪ್ರಮಾಣಕ್ಕೆ ಬೆಳೆದಿದೆ ಎಂಬುದು ಸಾರ್ವಜನಿಕರ ಆರೋಪ.

    ಪತ್ತೆ ಹಚ್ಚುವುದು ಕಷ್ಟ: ಬೆಳೆಗಳ ನಡುವೆ ಗಾಂಜಾ ಬೆಳೆದರೆ ಅದನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸ. ಎಷ್ಟೋ ಬಾರಿ ಏನೋ ರೈತ ಹೊಲ ಹಾಳು ಬಿಟ್ಟಿದ್ದಾನೆ, ಅದಕ್ಕೆ ಅಲ್ಲಿ ಕಾಂಗ್ರೆಸ್ ಗಿಡ ಬೆಳೆದಿದೆ ಎಂದು ನಿರ್ಲಕ್ಷಿಸಿರುವ ಪ್ರಕರಣಗಳು ಸಾಕಷ್ಟಿವೆ. ಆದರೆ, ಈ ನಿರ್ಲಕ್ಷ್ಯ ದಂಧೆಕೋರರಿಗೆ ಲಾಭ ಮಾಡಿಕೊಡುತ್ತಿದೆ. ಈಗಲಾದರೂ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡು, ಗಾಂಜಾಗೆ ಕಡಿವಾಣ ಹಾಕಲು ಮುಂದಾಗಬೇಕಿದೆ.

    ರಾಗಿಣಿಗೆ ಸಿಸಿಬಿ ನೋಟಿಸ್

    ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ನಟಿ ರಾಗಿಣಿ ದ್ವಿವೇದಿಗೆ ಗುರುವಾರ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ಆರೋಪದ ಮೇಲೆ ರಾಗಿಣಿ ಆಪ್ತ ಮತ್ತು ಜಯನಗರದ ಆರ್​ಟಿಒ ಕಚೇರಿ ದ್ವಿತೀಯ ದರ್ಜೆ ಸಹಾಯಕ ರವಿಶಂಕರ್​ನನ್ನು ಬುಧವಾರ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈತನ ಹೇಳಿಕೆ ಮೇರೆಗೆ ನಟಿಗೂ ನೋಟಿಸ್ ಕೊಟ್ಟಿದ್ದು, ತನಿಖೆಯಿಂದ ಮತ್ತಷ್ಟು ನಟ-ನಟಿಯರಿಗೂ ಕಂಟಕ ಕಾದಿದೆ. ಮತ್ತೊಂದೆಡೆ ಎನ್​ಸಿಬಿಗೆ ಸೆರೆಸಿಕ್ಕ ದೆಹಲಿ ಮೂಲದ ಎಫ್.ಅಹಮದ್, ಹೇಳಿಕೆ ಮೇರೆಗೆ ಕೆಲ ಕಲಾವಿದರ ಮೇಲೆ ನಿಗಾವಹಿಸಲಾಗಿದೆ.

    ಯಾರೋ ಒಬ್ಬರು ಮಾಡಿರುವ ಕೆಲಸಕ್ಕೆ, ಇಡೀ ಚಿತ್ರರಂಗವನ್ನು ದೂಷಿಸುವುದು ಸರಿಯಲ್ಲ. ಸ್ಯಾಂಡಲ್​ವುಡ್ ಡ್ರಗ್ ಮಾಫಿಯಾ ಎಂದು ಹೇಳುವುದು ಸರಿಯಲ್ಲ. ಆರು ತಿಂಗಳುಗಳಿಂದ ಚಿತ್ರರಂಗ ಸಂಕಷ್ಟದಲ್ಲಿದೆ. ಹೀಗಿರುವಾಗಲೇ ಡ್ರಗ್ಸ್ ವಿಚಾರದಲ್ಲಿ ಚಿತ್ರರಂಗದ ಬಗ್ಗೆ ಆರೋಪ ಕೇಳಿ ನೋವಾಗಿದೆ.

    | ಜೈರಾಜ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

    ಕೆಲವರು ಗಾಂಧಿನಗರವನ್ನು ಗಾಂಜಾನಗರ ಎನ್ನುತ್ತಿದ್ದಾರೆ. ದಯವಿಟ್ಟು ಹಾಗೆಲ್ಲಾ ಬಿಂಬಿಸಬೇಡಿ. 40 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ನಾನ್ಯಾವತ್ತೂ ಇವನ್ನೆಲ್ಲ ನೋಡಿದ್ದೇ ಇಲ್ಲ. ಚಿತ್ರರಂಗವನ್ನು ತಾಯಿಯಂತೆ ನೋಡಿದ್ದೇವೆ. ಇದನ್ನೇ ನಂಬಿ ಬದುಕಿದ್ದೇವೆ. ದಯವಿಟ್ಟು ಕಳಂಕ ತರಬೇಡಿ.
    | ದೊಡ್ಡಣ್ಣ ಹಿರಿಯ ನಟ
    ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯದ ಹಲವು ಕಡೆಗಳಲ್ಲಿ ದಾಳಿಗಳನ್ನು ನಡೆಸಲಾಗಿದೆ, ಬೆಂಗಳೂರು ಸೇರಿ ವಿವಿಧೆಡೆ ಬಹಳಷ್ಟು ಪ್ರಕರಣಗಳು ದಾಖಲಾಗಿವೆ. ತನಿಖೆ ಚುರುಕುಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಫಲಿತಾಂಶ ಜನರ ಮುಂದೆ ಬರಲಿದೆ.
    | ಪ್ರವೀಣ ಸೂದ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ)
    2009ರಿಂದಲೇ ರಾಜ್ಯದಲ್ಲಿ ಡ್ರಗ್ಸ್, ಸೆಕ್ಸ್ ಮಾಫಿಯಾ ಕೆಲಸ ಮಾಡುತ್ತಿದೆ. ಡ್ರಗ್ಸ್ ಮಾಫಿಯಾ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿದೆ. ನಮ್ಮ ಕೈಯಲ್ಲಿ ಹುಡುಕೋಕೆ ಆಗಿಲ್ಲ ಎಂದು ಪೊಲೀಸರು ಹೇಳಿದರೆ ಮಾಫಿಯಾದಲ್ಲಿ ಯಾರ್ಯಾರು, ಎಲ್ಲಿದ್ದಾರೆಂದು ನಾನೇ ತೋರಿಸುತ್ತೇನೆ.
    | ಪ್ರಮೋದ ಮುತಾಲಿಕ್ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ
    ಡ್ರಗ್ಸ್ ದಂಧೆ ಬೆಂಗಳೂರು ಮತ್ತು ಸ್ಯಾಂಡಲ್​ವುಡ್​ಗೆ ಸೀಮಿತವಲ್ಲ, ಗ್ರಾಮೀಣ ಪ್ರದೇಶದಲ್ಲೂ ಡ್ರಗ್ಸ್ ಮತ್ತು ಗಾಂಜಾ ಸಿಗುತ್ತವೆ. ಹೊರ ದೇಶದಿಂದ ಬಂದಿರುವ ಪ್ರಜೆಗಳು ನಿರ್ಭಯವಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ. ಇದೆಲ್ಲದರ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ.
    | ಎಲ್.ಆರ್.ಶಿವರಾಮೇಗೌಡ ಮಾಜಿ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts