ನ್ಯೂಸ್

ಚಿತ್ರನಟ ಸಂಜಯ್‌ ದತ್‌ಗೆ ಸಿಕ್ಕಿತು ದುಬೈನ ಗೋಲ್ಡನ್‌ ವೀಸಾ- ಟ್ವಿಟರ್‌ನಲ್ಲಿ ಮಾಹಿತಿ

ದುಬೈ: ಚಿತ್ರನಟ ಸಂಜಯ್‌ ದತ್‌ ಅವರಿಗೆ ಅರಬ್‌ ಎಮಿರೇಟ್ಸ್‌ನ (ಯುಎಇ) ಗೋಲ್ಡನ್ ವೀಸಾ ದೊರೆತಿದೆ. ಈ ಕುರಿತು ಟ್ವಿಟರ್‌ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಮೇಜರ್ ಜನರಲ್ ಮೊಹಮ್ಮದ್ ಅಲ್ ಮರಿ ಅವರ ಸಮ್ಮುಖದಲ್ಲಿ ಯುಎಇ ಗೋಲ್ಡನ್ ವೀಸಾ ‍ಪಡೆದಿದ್ದೇನೆ. ಇದು ಅತ್ಯಂತ ಗೌರವದ ಸಂಗತಿಯಾಗಿದೆ. ಈ ಗೌರವಕ್ಕಾಗಿ ಯುಎಇ ಸರ್ಕಾರ ಮತ್ತು ಫ್ಲೈ ದುಬೈನ ಸಿಒಒ ಹಮದ್ ಒಬೈದಲ್ಲಾ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಟ್ವಿಟರ್‌ನಲ್ಲಿ ಸಂಜಯ್‌ ದತ್‌ ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ ಗೋಲ್ಡನ್‌ ವೀಸಾ ಪ್ರಯೋಜನ ಏನೆಂದರೆ: ವಿದೇಶಿಯರು ಯುಎಇನಲ್ಲಿ ಯಾವುದೇ ಅನುಮತಿ ಇಲ್ಲದೆ ವಿದ್ಯಾಭ್ಯಾಸ, ಕೆಲಸ, ಉದ್ಯಮ ನಡೆಸಬಹುದು. 2019ರಿಂದ ವಿದೇಶಿಯರಿಗೆ 'ಗೋಲ್ಡನ್ ವೀಸಾ'ವನ್ನು ಯುಎಇ ಸರ್ಕಾರ ನೀಡುತ್ತಿದೆ. ಇದರಿಂದ ವಿದೇಶಿ ಹೂಡಿಕೆದಾರರು ಮತ್ತು ಉದ್ಯಮಿಗಳು ಯುಎಇನಲ್ಲಿ ಸಂಪೂರ್ಣ ಮಾಲೀಕತ್ವದಲ್ಲಿ ಉದ್ಯಮ ನಡೆಸಬಹುದು. 5 ಅಥವಾ 10 ವರ್ಷಗಳ ಅವಧಿಗೆ ಗೋಲ್ಡನ್ ವೀಸಾ ನೀಡಲಾಗುತ್ತದೆ. ಬಳಿಕ ಅದನ್ನು ನವೀಕರಿಸಿಕೊಳ್ಳಬಹುದು.

ಇವರ ಪತ್ನಿ, ನಟಿ ಮತ್ತು ನಿರ್ಮಾಪಕಿ ಮಾನ್ಯತಾ ತಮ್ಮ ಅವಳಿ ಮಕ್ಕಳಾದ ಶಹ್ರಾನ್ ಮತ್ತು ಇಕ್ರಾ (10) ಜತೆ ದುಬೈನಲ್ಲಿಯೇ ಕೆಲ ವರ್ಷಗಳಿಂದ ನೆಲೆಸಿದ್ದಾರೆ.