ನ್ಯೂಸ್

ಲ್ಯಾಂಡ್​ಲೈನ್​ನಿಂದ ಮೊಬೈಲ್​ಗೆ ಕರೆ: ಬದಲಾಗಿದೆ ನಿಯಮ- ಜ.1ರಿಂದ ಜಾರಿ

suchetana

ನವದೆಹಲಿ: ಸ್ಮಾರ್ಟ್​ಫೋನ್​ ಬಂದ ಮೇಲೆ ಲ್ಯಾಂಡ್​ಲೈನ್​ ಬಳಕೆ ಕಡಿಮೆಯಾಗಿದ್ದರೂ, ಕಚೇರಿಗಳಲ್ಲಿ ಹಾಗೂ ಕೆಲವೊಂದು ಮನೆಗಳಲ್ಲಿ ಇನ್ನೂ ಲ್ಯಾಂಡ್​ಲೈನ್​ಗಳು ಬಳಕೆಯಲ್ಲಿವೆ. ಇಂಥ ಲ್ಯಾಂಡ್​ಲೈನ್​ಗಳಲ್ಲಿ ಒಂದು ಮಾರ್ಪಾಟನ್ನು ಮಾಡಲಾಗಿದೆ.

ಜನವರಿ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (TRAI) ಶಿಫಾರಸು ಮಾಡಿದ್ದು, ಅದನ್ನು ಟೆಲಿಕಾಂ ಇಲಾಖೆ ಒಪ್ಪಿಗೆ ಸೂಚಿಸಿದೆ.

ಬದಲಾದ ನಿಯಮ ಏನೆಂದರೆ, ಯಾವುದೇ ಲ್ಯಾಂಡ್‌ಲೈನ್ ಫೋನ್‌ನಿಂದ ಮೊಬೈಲ್ ಫೋನ್‌ಗೆ ಕರೆ ಮಾಡುವಾಗ ಆರಂಭದಲ್ಲಿ ಜೀರೊ (0) ಸೇರಿಸುವುದು ಕಡ್ಡಾಯ. ವ್ಯಕ್ತಿಯು ಲ್ಯಾಂಡ್​​ಲೈನ್​ನಲ್ಲಿ ಸೊನ್ನೆ ಒತ್ತದೇ ನೇರವಾಗಿ, ಮೊಬೈಲ್ ನಂಬರ್​ಗೆ ಕರೆ ಮಾಡಿದರೆ ಆಗ ಸೊನ್ನೆ ಒತ್ತಬೇಕೆಂಬ ಬಗ್ಗೆ ವಾಯ್ಸ್​ ರೆಕಾರ್ಡ್​ ಪ್ಲೇ ಮಾಡುವಂತೆ ಇದಾಗಲೇ ನಿರ್ದೇಶನ ನೀಡಲಾಗಿದೆ.

ಟೆಲಿಕಾಮ್​​ ಸೇವೆಯಲ್ಲಿ ಸೂಕ್ತ ನಂಬರಿಂಗ್ ಸ್ಪೇಸ್​ ಸೃಷ್ಟಿಸುವ ಸಲುವಾಗಿ ಇಂಥದ್ದೊಂದು ಬದಲಾವಣೆ ಮಾಡಲಾಗಿದೆ ಎಂದು ಟ್ರಾಯ್​ ಹೇಳಿದೆ. ಮೊಬೈಲ್​ ಫೋನ್​ ಬಳಕೆದಾರರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಡಯಲಿಂಗ್ ವಿಧಾನದಲ್ಲಿ ಈ ಬದಲಾವಣೆ ಮಾಡಿದರೆ ಟೆಲಿಕಾಂ ಕಂಪೆನಿಗಳು ಮೊಬೈಲ್ ಸೇವೆಗಳಿಗಾಗಿ 254.4 ಕೋಟಿ ಹೆಚ್ಚುವರಿ ಸಂಖ್ಯೆಗಳನ್ನು ರಚಿಸುವ ಸೌಲಭ್ಯವನ್ನು ಪಡೆಯಬಹುದಾಗಿದೆ.