ನ್ಯೂಸ್

ಬಿಜೆಪಿ ವಿಜಯೋತ್ಸವದಲ್ಲಿ ಕೈ ಕಾರ್ಯಕರ್ತರ ಗಲಾಟೆ: ಮಾರಾಮಾರಿಯಲ್ಲಿ ತಂದೆ-ಮಗನ ಸಾವು

suchetana

ಜೈಪುರ: ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದ ಹಿನ್ನೆಲೆಯಲ್ಲಿ, ನಡೆಯುತ್ತಿದ್ದ ವಿಜಯೋತ್ಸವದಲ್ಲಿ ಕಾಂಗ್ರೆಸ್​ ಕಾರ್ಯಕರ್ತರಿಂದ ನಡೆದಿದೆ ಎನ್ನಲಾದ ಗಲಾಟೆ ವಿಕೋಪಕ್ಕೆ ಹೋಗಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ವಿಜಯೋತ್ಸವದ ಸಮಯದಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳ ಕಾರ್ಯಕರ್ತರಿಂದ ನಡೆದ ಮಾರಾಮಾರಿಯಲ್ಲಿ ತಂದೆ-ಮಗ ಬಲಿಯಾಗಿರುವುದಾಗಿ ವರದಿಯಾಗಿದೆ. ಈ ಗಲಾಟೆಯಲ್ಲಿ ಕನಿಷ್ಠ ಹತ್ತು ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಫತೇಪುರ ಪಟ್ಟಣದ ಬಲೋಡ್ ಬಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಂಚಾಯತ್ ಸಮಿತಿ ಫತೇಪುರ್ ವಾರ್ಡ್ ನಂ 19ರಲ್ಲಿ ಬಿಜೆಪಿ ಅಭ್ಯರ್ಥಿ ರುಬಿನಾ ಖಾನ್ ಜಯ ಗಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು, ಮೆರವಣಿಗೆ ನಡೆಯುತ್ತಿತ್ತು. ಅದೇ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕನನ್ನು ಯಾರೋ ಥಳಿಸಿದ್ದಾರೆ.

ಇದರಿಂದಾಗಿ ಕಾಂಗ್ರೆಸ್​ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿದೆ. ಕೈಯಲ್ಲಿ ಕೋಲುಗಳನ್ನು ಹಿಡಿದು ಪರಸ್ಪರ ಘರ್ಷಣೆ ನಡೆಸಿದರು. ಕೆಲವರು ಸ್ಥಳೀಯರ ಮನೆ ಕಲ್ಲು ತೂರಿಸಲು ಪ್ರಾರಂಭಿಸಿದರು. ಅಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಆದರೆ ಈ ನಡುವೆಯೇ 35 ವರ್ಷದ ಕನ್ಹಯ್ಯಾಲಾಲ್​ ಮತ್ತು ಅವರ 57 ವರ್ಷದ ತಂದೆ ಪ್ಯಾರೆಲಾಲ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡರು. ಇನ್ನೂ 10 ಜನರಿಗೆ ಗಾಯವಾಯಿತು. ಎಲ್ಲರನ್ನೂ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು.

ಗಂಭೀರವಾಗಿ ಗಾಯಗೊಂಡಿದ್ದ ಮಗ ಕನ್ಹಯ್ಯಾಲಾಲ್​ ಮಾರ್ಗಮಧ್ಯೆಯೇ ಮೃತಪಟ್ಟರೆ, ತಲೆಗೆ ಗಂಭೀರವಾದ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿರುವಾಗ ತಂದೆ ಪ್ಯಾರೆಲಾಲ್​ ಮೃತಪಟ್ಟರು.

ಈ ಪ್ರಕರಣದಲ್ಲಿ ನಾವು ಈವರೆಗೆ 22 ಜನರನ್ನು ವಶಕ್ಕೆ ಪಡೆದಿದ್ದೇವೆ. ಸಂಪೂರ್ಣ ವಿಷಯವನ್ನು ತನಿಖೆ ಮಾಡುತ್ತಿದ್ದೇವೆ ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಸಿಕಾರ್ ಪೊಲೀಸ್ ವರಿಷ್ಠಾಧಿಕಾರಿ ಗಗನ್‌ದೀಪ್ ಸಿಂಗ್ಲಾ ಹೇಳಿದ್ದಾರೆ.