ನ್ಯೂಸ್

ಹುಡುಗಿ ಸಿಕ್ತಿಲ್ಲ ಎಂದು ₹3 ಲಕ್ಷ ಕೊಟ್ಟು ಮದ್ವೆಯಾದ- ಮದುಮಗಳ ಸೇರುವ ಕನಸು ಕಾಣ್ತಿರುವಾಗಲೇ...

ಭರತಪುರ (ರಾಜಸ್ಥಾನ): ಹುಡುಗಿಯೇ ಸಿಗುತ್ತಿಲ್ಲ ಎಂದು ಅನೇಕ ವರ್ಷ ನೊಂದು ಬೆಂದುಹೋಗಿದ್ದ ಯುವಕನೊಬ್ಬ ಕೊನೆಗೆ ಮೂರು ಲಕ್ಷ ರೂಪಾಯಿಯನ್ನು ಕೊಟ್ಟು ಹುಡುಗಿಯೊಬ್ಬಳನ್ನು ವಿವಾಹವಾದರೆ, ಮದುವೆಯಾಗಿ 13 ದಿನಕ್ಕೆ ಆಕೆ ಪರಾರಿಯಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಭರತಪುರ ಜಿಲ್ಲೆಯ ಬಯಾನಾ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ಮದರ್ ಗ್ರಾಮದ ನಾರಾಯಣ ಸಿಂಗ್ ಗುರ್ಜರ್ ಎಂಬಾತ ಈಗ ಹಣವನ್ನೂ ಕಳೆದುಕೊಂಡು, ಪತ್ನಿಯನ್ನೂ ಕಳೆದುಕೊಂಡು ಗೋಳೋ ಎನ್ನುತ್ತಿದ್ದು ಪತ್ನಿಯನ್ನು ಹುಡುಕಿಕೊಡಿ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ.

ನಾರಾಯಣ ಸಿಂಗ್​ಗೆ ಹುಡುಗಿಯೇ ಸಿಕ್ಕಿರಲಿಲ್ಲ. ನಂತರ ಅದೇ ಗ್ರಾಮದ ಹುಡುಗಿಯೊಬ್ಬಳನ್ನು ನೋಡಿ ಮದುವೆಯಾಗುವ ಇಚ್ಛೆ ಆಯ್ತು. ನಂತರ ಆ ಯುವತಿಯ ತಂದೆಗೆ ಮೂರು ಲಕ್ಷ ರೂಪಾಯಿ ಹಣವನ್ನು ನೀಡಿ ಆಕೆಯನ್ನು ಮದುವೆಯಾದ.

ಯುವತಿಯ ತಂದೆ ಮೂರು ಲಕ್ಷ ಪಡೆದು ಮಗಳನ್ನು ಮದುವೆಯನ್ನೇನೋ ಮಾಡಿಕೊಟ್ಟರು. ಆದರೆ ಮಗಳು ಮದುವೆಗೆ ಒಪ್ಪಿದ್ದಾಳೋ ಇಲ್ಲವೋ ಕೇಳಲೇಇಲ್ಲ.

ತಾನು ಇಷ್ಟಪಟ್ಟ ಹುಡುಗಿ ಸಿಕ್ಕಳು ಎನ್ನುವ ಖುಷಿಯಲ್ಲಿದ್ದ ಯುವಕ ನಾರಾಯಣ ಮದುಮಗಳ ಜತೆ ಕನಸು ಕಾಣಲು ಶುರುಮಾಡಿದ. ಮದುವೆಯಾದ ದಿನದಿಂದಲೂ ಒಂದೊಂದು ನೆಪ ಹೇಳಿ ಆತನಿಂದ ದೂರವಿದ್ದ ಮದುಮಗಳು ಕೊನೆಗೂ 13ನೇ ದಿನ ಮದುಮಗನ ಜತೆ ಸೇರಲು ಒಪ್ಪಿದಳು. ಆ ದಿನಕ್ಕಾಗಿ ಹವಣಿಸುತ್ತಿದ್ದ ಮದುಮಗ ನಾರಾಯಣ ಮನೆಯೆಲ್ಲಾ ಹುಡುಕಾಡಿದರೂ ಹೆಂಡತಿಯೇ ಕಾಣಿಸಲಿಲ್ಲ.

ನಂತರ ಪೊಲೀಸ್​ ಠಾಣೆಗೆ ದೂರು ದಾಖಲಾದಾಗಲೇ ಗೊತ್ತಾಗಿದ್ದು, ಆತನ ಪತ್ನಿ ಬೇರೆ ಯುವಕನ ಜತೆ ಎಸ್ಕೇಪ್​ ಆಗಿದ್ದಾಳೆ ಎಂದು! ಪತ್ನಿ ಸುನಿತಾಳನ್ನು ವಾಪಸ್​ ಕರೆತನ್ನಿ ಎಂದು ಮಾವನ ಮನೆಯ ದುಂಬಾಲು ಬಿದ್ದಿದ್ದಾನೆ ಈ ಮದುಮಗ.