ಜೈಪುರ (ರಾಜಸ್ಥಾನ): ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರೇ ಒಬ್ಬರಾದ ಮೇಲೆ ಒಬ್ಬರು ಅನೇಕ ವರ್ಷಗಳಿಂದ ಕಾಂಗ್ರೆಸ್ ಅಧ್ಯಕ್ಷರಾಗುತ್ತಾ ಬಂದಿದ್ದಾರೆ. ಸದ್ಯ ಸೋನಿಯಾಗಾಂಧಿ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಆದ್ದರಿಂದ ಪಕ್ಷದ ಮುಂದಿನ ಅಧ್ಯಕ್ಷ ಯಾರಾಗಬೇಕು ಎಂಬ ಚರ್ಚೆ ಶುರುವಾಗಿದೆ. ಇದಕ್ಕಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಗಳ ಸಭೆ ನಡೆಯುತ್ತಿದೆ. ಈ ಸಭೆಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರಿಗೆ ಎಐಸಿಸಿ ಸೇರಿದಂತೆ ವಿವಿಧ ಸಮಿತಿಗಳ ಸದಸ್ಯರನ್ನು ನೇಮಿಸುವ ಅಧಿಕಾರ ನೀಡುವ ನಿರ್ಣಯವನ್ನು ಮಂಡಿಸಿ ಅಂಗೀಕರಿಸಲಾಗುತ್ತಿದೆ.
ಇದಕ್ಕೆ ರಾಜಸ್ಥಾನ ಸರ್ಕಾರದಿಂದ ಮೊದಲ ವೋಟು ಬಿದ್ದಿದೆ. ಸಂಸದ ರಾಹುಲ್ ಗಾಂಧಿ ಅವರೇ ತಮ್ಮ ಮುಂದಿನ ಅಧ್ಯಕ್ಷರು ಎಂದು ರಾಜಸ್ಥಾನ ಕಾಂಗ್ರೆಸ್ ನಿರ್ಣಯ ಅಂಗೀಕರಿಸಿದೆ. ಜೈಪುರದಲ್ಲಿ ನಡೆದ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಸಭೆಯಲ್ಲಿ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಮಾಡುವ ನಿರ್ಣಯವನ್ನು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಸ್ತಾಪಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಸ್ಥಾನ ಸಚಿವ ಪಿ.ಎಸ್.ಖಚರಿಯಾವಾಸ್, ರಾಹುಲ್ ಗಾಂಧಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಲು ತೀರ್ಮಾನಿಸಲಾಗಿದೆ. ರಾಜ್ಯಾಧ್ಯಕ್ಷರ ನೇಮಕ ಸೇರಿದಂತೆ ರಾಷ್ಟ್ರೀಯ ಅಧ್ಯಕ್ಷರು ಏನೇ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ಎಲ್ಲರೂ ಬದ್ಧರಾಗುತ್ತಾರೆ ಎಂಬ ನಿರ್ಣಯವನ್ನೂ ಅಂಗೀಕರಿಸಲಾಗಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ಅಧ್ಯಕ್ಷರಾದರೆ, ಪಕ್ಷವು ಒಗ್ಗಟ್ಟಾಗಿ ಉಳಿಯುತ್ತದೆ ಎಂದು ಕಳೆದ ತಿಂಗಳು ಅಶೋಕ್ ಗೆಹ್ಲೋಟ್ ಹೇಳಿದ್ದರು. ಆದರೆ ಗೆಹ್ಲೋಟ್ ಈ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ ಎಂಬ ವರದಿಗಳೂ ಇತ್ತೀಚೆಗೆ ಕೇಳಿಬಂದಿತ್ತು.
2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ರಾಹುಲ್ ಗಾಂಧಿ ಅವರು ಸೋಲಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಸೋನಿಯಾ ಹಂಗಾಮಿ ಅಧ್ಯಕ್ಷೆಯಾಗಿ ಮುಂದುವರೆದಿದ್ದರು.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಈ ಸಭೆ ನಡೆದಿದ್ದು, ಸೆಪ್ಟೆಂಬರ್ 24ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಸೆ.22 ರಂದು ಅಧಿಸೂಚನೆ ಹೊರಬೀಳಲಿದ್ದು, ಸೆಪ್ಟೆಂಬರ್ 24 ರಿಂದ 30ರ ವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನವಾಗಿದ್ದು, ಚುನಾವಣೆ ಅಗತ್ಯವಿದ್ದಲ್ಲಿ ಅಕ್ಟೋಬರ್ 17 ರಂದು ನಡೆಯಲಿದೆ. ಅಕ್ಟೋಬರ್ 19 ರಂದು ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್)