ಕುರುಕ್ಷೇತ್ರ (ಹರಿಯಾಣ): ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಎಂದಿನಂತೆ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಚೀನಿ ಸೈನಿಕರನ್ನು ಓಡಿಸುವ ಮಾತನ್ನಾಡಿದ್ದಾರೆ.
ಒಂದು ವೇಳೆ ಅಧಿಕಾರವೇನದರೂ ನಮ್ಮ ಕೈಯಲ್ಲಿ ಇದ್ದಿದ್ದೇ ಆಗಿದ್ದರೆ ಚೀನಾ ಸೈನ್ಯವನ್ನು ಲಡಾಖ್ನಿಂದ ಹೊರಕ್ಕೆ ಹಾಕಲು 15 ನಿಮಿಷ ಮಾತ್ರ ಸಾಕಾಗುತ್ತಿತ್ತು. ಇದಕ್ಕಿಂತ ಹೆಚ್ಚಿನ ಸಮಯ ನಮಗೆ ಬೇಕಿರಲಿಲ್ಲ. ಆದರೆ ಈಗಿನ ಸರ್ಕಾರಕ್ಕೆ ಏನೂ ಸಾಧ್ಯವಾಗುತ್ತಿಲ್ಲ ಎಂದು ಕಿಡಿ ಕಾರಿದರು.
ಹರಿಯಾಣದ ಕುರುಕ್ಷೇತ್ರದಲ್ಲಿ ಅವರು ಭಾಷಣ ಮಾಡಿ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಹರಿಯಾಣದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ: ದಲಿತ ಶಾಸಕನ ಅಂತರ್ಜಾತಿ ವಿವಾಹ: ತನಗಿಂತ 16 ವರ್ಷ ದೊಡ್ಡವನ ಪ್ರೀತಿಯ ಬಲೆಯಲ್ಲಿ ಯುವತಿ ಬಿದ್ದಿದ್ದೆ ರೋಚಕ!
ಚೀನಾ ಸೈನ್ಯವು ಈ ಮೊದಲು ಯಾವತ್ತೂ ಭಾರತದ ಭೂಪ್ರದೇಶದೊಳಗೆ ಕಾಲಿಡುವ ಧೈರ್ಯವನ್ನು ಮಾಡಿಯೇ ಇರಲಿಲ್ಲ. ಆದರೆ ಇದೀಗ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಭಾರತದ 1,200 ಚದರ ಕಿ.ಮೀ ಭೂಮಿಯನ್ನು ಆಕ್ರಮಿಸಿಕೊಂಡಿದೆ. ತನ್ನ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳಲು ಬೇರೆ ದೇಶವೊಂದಕ್ಕೆ ಅನುವು ಮಾಡಿಕೊಟ್ಟಿರುವ ಏಕೈಕ ದೇಶ ಭಾರತವಾಗಿದೆ ಎಂದು ಗುಡುಗಿದರು.
ಚೀನಾ ನಮ್ಮ ಭೂಪ್ರದೇಶವನ್ನು ಆಕ್ರಮಿಸಿಕೊಂಡಿರುವ ಬಗ್ಗೆ ಸ್ಪಷ್ಟ ಮಾಹಿತಿ ನೀಡದೇ ಪ್ರಧಾನಿ ಮೋದಿ ಸತ್ಯಾಂಶವನ್ನು ಮುಚ್ಚಿಡುತ್ತಿದ್ದಾರೆ. ಚೀನಾ ಪಡೆಗಳು ನಮ್ಮ ಭೂಪ್ರದೇಶದೊಳಗೆ ಇವೆ ಎಂಬುದು ಇಡೀ ದೇಶಕ್ಕೆ ತಿಳಿದ ವಿಷಯವಾಗಿದೆ. ತಮ್ಮನ್ನು ತಾವು ದೇಶಭಕ್ತ ಎಂದು ಕರೆದುಕೊಳ್ಳುವ ಮೋದಿ ಮಾತ್ರ ಏನನ್ನೂ ಹೇಳುತ್ತಿಲ್ಲ. ಅವರು ಯಾವ ಸೀಮೆಯ ದೇಶಭಕ್ತರು ಎಂದು ರಾಹುಲ್ ಪ್ರಶ್ನಿಸಿದರು.